Monday 22 August 2016

Landscapes from St.Mary's Island

Here are some of the landscapes from St. Mary's Island Udupi. It was a sunny day and there was no clouds.

Rocks and reflection

Rocks and reflection

Rocks

Sumset
Sunsset on my way back to home

Equipment used: Nikon P520 bridge cam.


Monday 30 December 2013

ಯಕ್ಷಗಾನ ಜೋಡಾಟ

ಯಕ್ಷಗಾನದ ತವರು ಜಿಲ್ಲೆಗಳಲ್ಲೊ೦ದಾದ ಉಡುಪಿಯಲ್ಲಿ ದಿ. ೨೯-೧೨-೨೦೧೩ ರ೦ದು ಶ್ರೀ ಸೋದೆ ಮಠದ ವತಿಯಿ೦ದ ಪ್ರಚಂಡ ಯಕ್ಷಗಾನ ಜೋಡಾಟ ನೆರವೇರಲ್ಪಟ್ಟಿತು. ರಾಜಾಂಗಣದಲ್ಲಿ ಯಕ್ಷ ರಾಜ ಕುಮಾರರ ಧೀಂಗಿಣವನ್ನು ನೋಡುವುದೇ ಕಣ್ಣಿಗೊಂದು ಹಬ್ಬ !. ಹಿಮ್ಮೇಳದಲ್ಲಿ ಬಲಿಪ ಪ್ರಸಾದ ಭಾಗವತ, ಸಿರಿಬಾಗಿಲು ರಾಮಕೃಷ್ಣ ಮಯ್ಯ , ತೆಂಕಬೈಲು  ಮುರಳೀಕೃಷ್ಣ ಶಾಸ್ತ್ರಿ , ಹೊಸಮೂಲೆ ಗಣೇಶ್ ಭಟ್ , ದೇಲಂತಮಜಲು ಸುಬ್ರಹ್ಮಣ್ಯ ಭಟ್ , ಚೈತನ್ಯ ಪದ್ಯಾಣ ಮುಂತಾದವರು ಮಿಂಚಿದರೆ , ಮುಮ್ಮೇಳದಲ್ಲಿ ಜಗದಾಭಿರಾಮ ಪಡುಬಿದ್ರಿ , ಸಂತೋಷ್ ಕುಲಶೇಖರ , ಅಶ್ವಥ್ ಮೂಡಬಿದ್ರಿ, ದೀಪಕ್ ರಾವ್ ಪೇಜಾವರ , ಶಂಭಯ್ಯ ಕಂಜರ್ಪಣೆ , ರಾಮಕೃಷ್ಣ ನಂದಿಕೂರು , ಗಣಾಧಿರಾಜ ಉಪಾಧ್ಯಾಯ ಮುಂತಾದ ಖ್ಯಾತನಾಮರು ಕಲಾ ರಸಿಕರನ್ನು ರಂಜಿಸಿದರು . ತೆಂಕುತಿಟ್ಟು ಕಲಾ ಪ್ರಕಾರದ ಈ ಜೋಡಾಟದಲ್ಲಿ 'ಮಹಿಷಾಸುರ ಮರ್ದಿನೀ' ಮತ್ತು 'ಕದಂಬ ವನವಾಸಿನಿ' ಎಂಬ ಎರಡು ಪ್ರಸಂಗಗಳನ್ನು ಆಡಿಸಿ ತೋರಿಸಲಾಯಿತು .

ಈ ಸಂಧರ್ಭ ದಲ್ಲಿ ತೆಗೆದ ಕೆಲಚಿತ್ರಗಳು ನಿಮಗಾಗಿ :












Sunday 29 December 2013

ಪಕ್ಷಿಗಳ ಲೋಕದಲ್ಲಿ

 ಬಹಳ ವರ್ಷಗಳ ಬಳಿಕ ಆದಿತ್ಯವಾರ ಬೆಳಗ್ಗೆಗೆ ಮೊಬೈಲ್ ನಲ್ಲಿ ಅಲರಾಂ ಸೆಟ್ ಮಾಡಿದ್ದೆ ! ಬ್ಲಾಗ್ಗೆ ಅಲರಾಂ ಆಗುವುದಕ್ಕೂ ಗೆಳೆಯ ಶ್ರೀಕಾಂತ ಫೋನ್ ಮಾಡುವುದಕ್ಕೂ ಸರಿಯಾಗಿತ್ತು. ಅತ್ತ ಕಡೆಯಿಂದ "ನಾನು ಮನೆಯಿ೦ದ ಹೊರಟಾಗಿದೆ , ಇನ್ನು ಹತ್ತ್  ನಿಮಿಷದಲ್ಲಿ ಉಡುಪಿ ಬಸ್ ಸ್ಟ್ಯಾಂಡ್ ನಲ್ಲಿ ಇರ್ತೇನೆ ನೀನೂ ಅಲ್ಲಿಗೆ ಬಾ " ಎಂದು ಒಂದೇ ಉಸಿರಿನಲ್ಲಿ ಹೇಳಿ ಫೋನ್ ಕಟ್ ಮಾಡಿದ. ಲಗುಬಗೆಯಿಂದ ಪ್ರಾತಃ ವಿಧಿಗಳನ್ನು ಪೂರೈಸಿ ಹಿಂದಿನ ದಿನ  ಜೋಡಿಸಿಡಲು ಮರೆತಿದ್ದ ಕ್ಯಾಮೆರ , ಪೆನ್ನು , ಪುಸ್ತಕ ತುರುಕಿ ಕೊಂಡು  ಬಸ್ ಸ್ಟ್ಯಾಂಡ್ ನತ್ತ ದೌಡಾಯಿಸಿದೆ. ನಾವಿಬ್ಬರೂ ಅಂದು ಕಾರ್ಕಳದಲ್ಲಿ ಪಕ್ಷಿ ತಜ್ಞ ಎಸ್. ಎ. ಹುಸ್ಸೇನ್ ಅವರ ಸ್ಮರಣಾರ್ಥ ಆಯೋಜಿಸಲಾಗಿದ್ದ 'ಪಕ್ಷಿ ವೀಕ್ಷಣೆ'(ಬರ್ಡ್ ವಾಚಿಂಗ್) ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವವರಿದ್ದೆವು. ಅದಾಗಲೇ ಬಸ್ ಸ್ಟ್ಯಾ೦ಡ್ ನಲ್ಲಿ ಕಾರ್ಕಳ ದ ಬಸ್ ಬಳಿ ನಿಂತು ನನಗಾಗಿ ಕಾಯುತ್ತಿದ್ದ ಶ್ರೀಕಾಂತ. ಇವೆಲ್ಲವನ್ನೂ ನೊಡುತ್ತಿದ್ದ ಭಾಸ್ಕರ ಬಾನ೦ಗಳದಲ್ಲಿ ಮೋಡಗಳ ಜೊತೆ ಕಣ್ಣಾಮುಚ್ಚಾಲೆ ಆಡುತ್ತಿದ್ದ.

ಪಶ್ಚಿಮ ಘಟ್ಟದ ತಪ್ಪಲು ಪ್ರದೇಶವಾದ ಕಾರ್ಕಳ ಉಡುಪಿ ಜಿಲ್ಲೆಯ ಪ್ರಸಿದ್ಧ ಪ್ರವಾಸೀ ಸ್ಥಳವೂ ಹೌದು. ಇಲ್ಲಿನ ವಿಶ್ವ ವಿಖ್ಯಾತ ಗೋಮತೇಶ್ವರನ ಏಕ ಶಿಲಾ ವಿಗ್ರಹವನ್ನು , ಹಲವಾರು ಪುರಾತನ ಜೈನ ಬಸದಿಗಳನ್ನು ನೋಡಲು ಹಲವಾರು ಪ್ರವಾಸಿಗರು ಪ್ರತೀ ವರ್ಷ ಆಗಮಿಸುತ್ತಾರೆ. ಪ್ರಕೃತಿ ಪ್ರಿಯರ ಪಾಲಿಗೆ ಇದೊ೦ದು ರೀತಿ ಸ್ವರ್ಗವಿದ್ದ೦ತೆ .  ಉಡುಪಿಯಿ೦ದ ಕಾರ್ಕಳಕ್ಕಿರುವ ದೂರ ಸುಮಾರು ೩೫-೩೮ ಕಿ.ಮೀ. 


 ಉಡುಪಿಯಿಂದ ಕಾರ್ಕಳದ ನಡುವಿನ ಬಸ್ ಪ್ರಯಾಣವಂತೂ ಹೇಳಲಸಾಧ್ಯ. ಅದರಲ್ಲೂ ಎಕ್ಸ್ ಪ್ರೆಸ್ ಬಸ್ ಪ್ರಯಾಣ ವೆಂದ ಮೇಲೆ ಅದನ್ನು ಅನುಭವಿಸಿಯೇ ಹೇಳಬೇಕು. ಯಾವುದೇ ಚಿಕ್ಕ , ದೊಡ್ಡ ಹೊಂಡಗಳನ್ನ ಲೆಕ್ಕಿಸದೇ ಬಸ್ ರಾಜಾ ರೋಷವಾಗಿ ಸಾಗುತ್ತಿದ್ದರೆ , ಇತ್ತ ಬಸ್ಸಿನೊಳಗೆ ಪ್ರಯಾಣಿಕರು ಕೈಗೆ ಸಿಕ್ಕ , ಕಂಬಿ , ಸೀಟಿನ ಅಂಚು ಯಾವುದನ್ನಾದರೂ ಗಟ್ಟಿಯಾಗಿ ಹಿಡಿದುಕೊಂಡು , ಅವಡುಗಚ್ಚಿ ತಮ್ಮ ಸ್ಟಾಪ್ ಬರುವುದನ್ನೇ ಕಾಯುತ್ತಿದರು. ಇದಕ್ಕೆ ಹಿನ್ನೆಲೆಯಾಗಿ ತಟಪಟ ಸದ್ದು ಮಾಡುತ್ತ  ಬಸ್ಸಿನ ಕಿಟಕಿಗಳ ಟ್ಯಾಪ್ ಡಾನ್ಸ್ !! ಎಲ್ಲ ಅನುಭವಿಸಿ ಕಾರ್ಕಳಕ್ಕೆ ಬಂದಿಳಿದಾಗ ಸಮಯ ೮:೨೦. ಅಲ್ಲಿಂದ ಸೀದಾ ನಡೆದದ್ದು ಹೋಟೆಲ್ ಪ್ರಕಾಶ್ ಬಳಿ ಅಲ್ಲಿ ಅದಾಗಲೇ ನಮ್ಮಂತೆ ಹಲವು ಹವ್ಯಾಸಿ ಪಕ್ಷಿ ವೀಕ್ಷಕರು ಬಂದು ಸೇರಿದ್ದರು.ಉಭಯ ಕುಶಲೋಪರಿ ವಿನಿಮಯವಾದ ಬಳಿಕ ಅಲ್ಲೇ ಪ್ರಕಾಶ್ ಹೋಟೆಲ್ ನಲ್ಲಿ ಬೆಳಗಿನ ಉಪಾಹಾರ ಮುಗಿಸಿದೆವು. ಅಲ್ಲಿ ನೆರೆದಿದ್ದ ೨೫ ಜನರು ೫ ತಂಡಗಳಾಗಿ ದುರ್ಗ ಅಭಯಾರಣ್ಯದತ್ತ ಪ್ರಯಾಣ ಬೆಳೆಸಿದೆವು.  ನಾನು ,ರಾಜ್ ಮೋಹನ್ ಸರ್ , ಯೆಸ್. ಎ . ಹುಸ್ಸೇನ್ ರ ಸಂಬಂಧಿ ರಶೀದ್ ಸರ್ , ಸುದೀಪ್, ಅಭಿಜಿತ್ , ರವಿ ಪ್ರಕಾಶ್ , ಶ್ರುತಿ ಈ ಏಳು ಜನರನ್ನೊಳಗೊ೦ಡ ನಮ್ಮ ತಂಡ ಅರಣ್ಯದ ಕೊನೆಯ ಭಾಗಕ್ಕೆ ಬಂದು ತಲುಪಿದೆವು. ಕಾಡು ಸೇರಿದ ನಮನ್ನು ವಿಶಾಲವಾಗಿ ಹಬ್ಬಿಕೊ೦ಡಿರುವ ಗಗನ ಚು೦ಬಿ ಮರಗಳು , ಆ ಮರಗಳನ್ನು ಬಿಗಿದಪ್ಪಿಕೊ೦ಡಿರುವ ವಿವಿಧ ಬಗೆಯ ಬಳ್ಳಿಗಳು, ಮರದಿ೦ದ ಮರಕ್ಕೆ ಹಬ್ಬಿದ ವಿಶಾಲವಾದ ಜೇಡರ ಬಲೆಗಳು ಇದೆಲ್ಲಕ್ಕಿ೦ತ ಹೆಚ್ಚಾಗಿ  ಗವ್ ಎನ್ನುವ ಮೌನ ಮತ್ತು ಆಗಾಗ್ಗೆ ಅದನ್ನು ಸೀಳಿಕೊಂಡು ಬರುತ್ತಿದ್ದ ಹಕ್ಕಿಗಳ ಚಿಲಿಪಿಲಿ ಗಾನ ಭರ್ಜರಿಯಾಗಿ ಸ್ವಾಗತಿಸಿದ್ದವು. ಪಶ್ಚಿಮ ಘಟ್ಟದ ಕಾಡೆ೦ದರೆ ಕೇಳಬೇಕೆ ? ಇಲ್ಲಿನ ಪ್ರತಿಯೊ೦ದು ಮರಗಳೂ ಆಗಷ್ಟೇ ಹುಟ್ಟಿದ೦ತೆ , ಹಸಿರುಹಸಿರಾಗಿ ತಾಜಾತನದಿ೦ದ ಕೂಡಿವೆ. ಈ ಸೌ೦ದರ್ಯವನ್ನು ಒ೦ದೊ೦ದಾಗಿ ಸವಿತಯುತ್ತಾ ಬ್ಯಾಗಿನಲ್ಲಿದ್ದ ಕ್ಯಾಮೆರ , ದುರ್ಬೀನು ಗಳನ್ನು ಬಗಲೇರಿಸಿಕೊಂಡು ಕೈಲಿ ಪುಸ್ತಕ ಪೆನ್ನು ಹಿಡಿದುಕೊಂಡು  ಪ್ರಾಕೃತಿಕ ಎ.ಸಿ. ಚೇ೦ಬರಿನೊಳಗೆ  ನಿಧಾನವಾಗಿ ಹೆಜ್ಜೆ ಹಾಕಿದೆವು.

ಕಾಡಿನಲ್ಲಿ ನಮಗೆ ಮೊದಲು ಕಾಣ ಸಿಕ್ಕಿದ್ದು purple sunbird ಅಥವಾ 'ನೇರಳೆ ಸೂರಕ್ಕಿ'  ಲೋಹದ ಹೊಳಪಿನ ಗಾಢ ನೀಲಿ ಮೈ ಬಣ್ಣ ಹೊಂದಿರುವ ಈ ಹಕ್ಕಿಯ ಎದೆಯ ಭಾಗದಲ್ಲಿ ಕೆಂಪು ಅಥವಾ ಹಳದಿ ಮಚ್ಚೆಗಳನ್ನು ಕಾಣಬಹುದು. ಚೆವಿಟ್ .. ಚೆವಿಟ್.. ಎದು ಕೂಗುತ್ತ ಮರದಿಂದ ಮರಕ್ಕೆ ಅತ್ತಿಂದಿತ್ತ  ಏನನ್ನೋ ತೆಗೆದುಕೊಂಡು ಹೋಗುತ್ತಿತ್ತು. ಒಂದೈದು ನಿಮಿಷ ಅದರ ಚಟುವಟಿಕೆ ಗಮನಿಸಿದ ನಮಗನ್ನಿಸಿದ್ದು ಅದು ಬಹುಶಃ ಗೂಡು ಕಟ್ಟುತ್ತಿರಬೇಕೆ೦ದು. ನಂತರ ಮುಂದೆ ಸಾಗಿದ ನಮಗೆ ಕಾಣಸಿಕ್ಕಿದ್ದು ಭಾರತದ ಸುಂದರ ಹಕ್ಕಿಗಳಲ್ಲೊ೦ದಾದ Asian paradaise flycatcher ಅಥವಾ  'ರಾಜ ಹಕ್ಕಿ ' ಕಡುನೀಲಿ , ಕಪ್ಪು ತಲೆ , ಅಚ್ಚ ಬಿಳಿ ದೇಹ ಹೊಂದಿದ ಈ ಹಕ್ಕಿಗೆ ಸುಮಾರು ೫೦ ಸೆಂ. ಮೀ . ಉದ್ದದ ಬಿಳಿ ಬಾಲವೂ ಇದೆ. ಈ ಹಕ್ಕಿಯನ್ನು ಕಂಡ ಕೂಡಲೇ ನಮ್ಮ ತಂಡದವರೆಲ್ಲರೂ ಆಶ್ಚರ್ಯದಿಂದ ಉದ್ಗರಿಸಿದ್ದರು. ಸುಮಾರು ೩೦ ಸೆಕೆಂಡುಗಳ ಕಾಲ ದರ್ಶನವಿತ್ತ ಈ ಹಕ್ಕಿ ಚ್... ಚ್ಯು.. ಎಂದು ಕೂಗುತ್ತಾ ಕಾಡ ಗರ್ಭದಲ್ಲಿ ಮರೆಯಾಯಿತು. ಈ ಹಕ್ಕಿ ಹಾರಾಡುವಾಗ ಅದರ ರಿಬ್ಬನಿನಂತಹ ಬಾಲಗಳು ಮನಮೋಹಕ , ಅದನ್ನು ನೋಡುವುದೇ ಕಣ್ಣಿಗೊಂದು ಹಬ್ಬ !. ಹೀಗೇ ಈ ಹಕ್ಕಿಯ ಕುರಿತಂತೆ ಒಬ್ಬೊಬ್ಬರು ತಮ್ ತಮ್ಮ ಅನುಭವಗಳನ್ನ ಹಂಚಿಕೊಳ್ಳುತ್ತಿದ್ದಾಗ ಛ೦ಗನೆ ನಮ್ಮೆದುರು ಹಾರಿ ಬಂದದ್ದು  Ruby throated bulbul ಅಥವಾ 'ಕೆ೦ಕೊರಳಿನ ಪಿಕಳಾರ'. ಕಪ್ಪು ತಲೆ , ಜುಟ್ಟು ,ಮಾಸಲು ಹಸಿರು ಮೇಲ್ಮೈ , ಕತ್ತಿನಲ್ಲಿ ಕೆಂಬಣ್ಣದ ಮಚ್ಚೆ ಹೊಂದಿದ ಈ ಹಕ್ಕಿ ನೋಡಲು ಬಲು ಚೆಂದ . ಸಂಗೀತ ಮನೆತನಕ್ಕೆ ಸೇರಿದ ಅದರಲ್ಲೂ ಸಮೂಹ ಗಾನಕ್ಕೆ ಹೆಸರಾದ ಈ ಹಕ್ಕಿಗಳು ಸಾಮಾನ್ಯವಾಗಿ ಕಾಡುಗಳಲ್ಲಿ, ಹೋದೋಟಗಳಲ್ಲಿ ,ಗಿಡ ಗಂಟಿ ಪೊದೆಗಳಲ್ಲಿ ಕಾಣ ಸಿಗುತ್ತವೆ. ಸದಾ ಕುತೂಹಲದಿಂದ , ಲವಲವಿಕೆಯಿಂದ ಅತ್ತಿಂದಿತ್ತ ಹಾರಾಡುತ್ತಿದ್ದರೆ ಇಡೀ ವಾತಾವರಣಕ್ಕೆ ಹೊಸ ಕಳೆ ಮೂಡುತ್ತದೆ. ನಂತರ ಕಾಣಸಿಕ್ಕಿದ್ದು Asian Fairy blue bird ಅಥವಾ 'ನೀಲಿ ಸಿಳ್ಳಾರ'. ಈ ಹಕ್ಕಿ ಕಡು ನೀಲಿ ಬಣ್ಣದಿಂದ ಕೂಡಿದ್ದು , ಕೆನ್ನೆ , ರೆಕ್ಕೆ ಹಾಗೂ ಬಾಲದ ಭಾಗ ಕಡು ಕಪ್ಪು ಬಣ್ಣ ಹೊಂದಿದೆ. ಬಾಲದ ಬುಡ ನೀಲಿ ಹಾಗು ಕಡು ಕೆಂಪು ಕಣ್ಣುಗಳನ್ನು ಹೊಂದಿದ ಈ ಹಕ್ಕಿ ಬಿಸಿಲಿಗೆ ಹೊಳೆಯುತ್ತ ಬಹು ಆಕರ್ಷಕವಾಗಿ ಕಾಣುತ್ತದೆ. ಇದರ ಸೌಂದರ್ಯ ವೀಕ್ಷಿಸುತ್ತಿದ್ದ ನಮಗೆ ಗಿಡ ಗ೦ಟಿಗಳ  ನಡುವಿನಿಂದ  ಕಿಚಿ... ಕಿಚೀ ಸದ್ದು ಮಾಡುತ್ತ ಸುಮಾರು ೬-೭ Black Throated Munia ಅಥವಾ ಕರಿಕತ್ತಿನ ರಾಟವಾಳ ಹಕ್ಕಿಗಳು ಮೀಟಿಂಗ್ ನಡೆಸುತ್ತಿದ್ದವು. ಕಡ್ಡಿಗಳನ್ನು ಹಿಡಿದುಕೊಡು ಜೋತಾಡುತ್ತಾ ಅತ್ತಿಂದಿತ್ತ ಜಿಗಿಯುತ್ತ ಏನೇನೋ ಮಾತನಾಡಿಕೊಳ್ಳುತ್ತಿದ್ದವು. ಫೊಟೊ ತೆಗೆಯೋಣ ಎಂದು ಫೋಕಸ್ ಮಾಡುವಷ್ಟರಲ್ಲಿ ಅಷ್ಟೂ ಹಕ್ಕಿಗಳು ಪುರ್ರನೆ ಹಾರಿ ತಮ್ಮ ಮೀಟಿಂಗ್ ಲೋಕೇಶನ್ ಶಿಫ್ಟ್ ಮಾಡಿಕೊಂಡವು .  ಸುಮಾರು ೧.೫ - ೨ ಕಿ. ಮೀ . ವರೆಗೂ ಸಾಗಿದ ನಮ್ಮ ತ೦ಡಕ್ಕೆ  ಇವಿಷ್ಟಲ್ಲದೇ ಇನ್ನೂ ಹತ್ತು ಹಲವು ಜಾತಿಯ ವಿಶಿಷ್ಟ ಹಕ್ಕಿಗಳು ಕಾಣ ಸಿಕ್ಕವು. ಇನ್ನೇನು ಬರ್ಡ್ ವಾಚಿಂಗ್ ಮುಗಿಯಿತು ಎನ್ನುವಷ್ಟರಲ್ಲಿ ಕೆಲ ಅಪರೂಪದ ಅತಿಥಿಗಳು ನಮಗಾಗಿ ಕಾಯುತ್ತಿದ್ದವು. ಅವೇ Malabaar Trogon , Shrilanka Frogmouth ಹಾಗೂ   Heart Spotted Wood pecker.

Malabaar Trogon ಅಥವಾ ಕಾಕಾರಣೆ ಹಕ್ಕಿಗಳು ನೋಡಲು ಬಲು ಚೆಂದ. ಕಪ್ಪು ತಲೆ , ಕತ್ತು , ಎದೆ , ಎದೆಯ ಮೇಲೆ ಬಿಳಿ ಸರ , ಹೊಳೆಯುವ ಕೆಂಬಣ್ಣದ ಕೆಳ  ಮೈ , ಹಳದಿಗಂದು ಬೆನ್ನು , ಬಿಳಿ ಪಟ್ಟೆ ಹೊಂದಿದ ಅಪ್ಪು ರೆಕ್ಕೆಗಳನ್ನು ಹೊಂದಿದ ಈ ಹಕ್ಕಿಯ ಸೌಂದರ್ಯವನ್ನ ಬರಿಯ ಪದಗಳಲ್ಲಿ ವರ್ಣಿಸಲಸಾಧ್ಯ. ಸದಾ ಹಸಿರು ತುಂಬಿರುವ ಕಾಡುಗಳಲ್ಲಿ ಈ ಹಕ್ಕಿಗಳು ಹೆಚ್ಚಾಗಿ ಕಾಣಸಿಗುತ್ತವೆ.Shrilanka Frogmouth ಅಥವಾ ಕಪ್ಪೆ ಬಾಯಿ , ತುಸು ನಾಚಿಕೆ ಸ್ವಭಾವದ ಈ ನಿಶಾಚರಿ ಅಗಲವಾದ ಚಪ್ಪಟೆಯಾದ ತ್ರಿಕೋನಾಕಾರದ ಕೊಕ್ಕನ್ನು ಹೊಂದಿದ್ದು , ಕಪ್ಪೆಯಂತಹ ಬಾಯಿ , ಗಿಡ್ಡ ಕತ್ತು ಹಾಗು ಕಾಲುಗಳನ್ನು ಹೊ೦ದಿದೆ . ಈ ಹಕ್ಕಿ ಹೆಚ್ಚಾಗಿ ಬಿದಿರು ಕಾಡುಗಳಲ್ಲಿ ವಾಸಿಸುತ್ತವೆ. ಹಗಲು ಹೊತ್ತಿನಲ್ಲಿ ಮಲಗಿರುವ ಈ ಹಕ್ಕಿ ಪಕ್ಕನೆ ನೋಡಿದಾಗ ಮರದ ಬೊಡ್ಡೆಯ೦ತೆಯೋ ಇಲ್ಲಾ ಒಣಗಿದ ಎಲೆಯ೦ತೆಯೋ ಕಾಣುತ್ತದೆ.    ಇನ್ನು   Heart Spotted Wood pecker ಅಥವಾ ಚುಕ್ಕೆ ಮರಕುಟಿಗ. ತೇಗ , ಬಿದಿರು ಕಾಡುಗಳಲ್ಲಿ ಕಾಣ ಬರುವ ಈ ಹಕ್ಕಿಯ ಜುಟ್ಟು , ತಲೆ  ಹಣೆ ಹಾಗೂ ಬೆನ್ನಿನ  ಭಾಗ ಕಪ್ಪು ಬಣ್ಣದಿಂದ ಕೂಡಿದ್ದು ಗಂಟಲು , ಹಿಂಗತ್ತು ಹಾಗೂ ಕೆಳಮೈ ಬಿಳಿ ಬಣ್ಣದಿಂದ ಕೂಡಿದೆ. ರೆಕ್ಕೆಗಳ ಬಿಳಿ ಪಟ್ಟೆಯ ಮೇಲೆ ಹೃದಯಾಕಾರದ ಮಚ್ಚೆಗಳಿದ್ದು ನೋಡಲು ಅತ್ಯಾಕರ್ಷಕವಾಗಿದೆ. ಒಟ್ಟಾರೆಯಾಗಿ ಅಂದು ನಮ್ಮ ತಂಡ ೩೦-೩೫ ವಿವಿಧ ಪ್ರಭೇಧದ ಹಕ್ಕಿಗಳನ್ನು ಗುರುತಿಸಿತ್ತು.  ಚಾರಣದುದ್ದಕ್ಕೂ ರಾಜ್ ಮೋಹನ್ ಸರ್ ಹಾಗೂ ರಶೀದ್ ಸರ್  ಹಕ್ಕಿಗಳ  ಬಗೆಗಿನ ಕುತೂಹಲಕಾರಿ ವಿಷಯಗಳನ್ನು ನಮ್ಮೊಡನೆ ಹಂಚಿಕೊಳ್ಳುತ್ತಿದ್ದರು. 

ಕಾಡಿನಿಂದ ಹೊರ ಬಂದ  ನಮಗೆ ಯಾವುದೋ ಹೊಸ ಲೋಕಕ್ಕೆ ಹೋಗಿ  ಬಂದ ಅನುಭವವಾಗಿತ್ತು. ಸುಮಾರು ೨-೨:೩೦ ಗ೦ಟೆಗಳ ಕಾಲ ಹೊರಜಗತ್ತಿನ ಪರಿವೇ ಇಲ್ಲದೆ(ಮೊಬೈಲ್ , ಇಂಟರ್ ನೆಟ್ ಸಂಪರ್ಕ ಕಡಿದು ಹೋದುದರಿಂದ ) ಪಕ್ಷಿಗಳ ಲೋಕದಲ್ಲಿ , ಪ್ರಕೃತಿಯ ಜತೆ ಒಂದಾಗಿ ಇದ್ದುದು ಹೊಸ ಅನುಭವವನ್ನು ನೀಡಿತ್ತು. ಮಧ್ಯಾಹ್ನ ಒಂದು ಘಂಟೆಗೆ ಸರಿಯಾಗಿ ನಮ್ಮ ಬರ್ಡ್ ವಾಚಿಂಗ್ ಮುಗಿದಿತ್ತು. ಮನದ ಮೂಲೆಯಲ್ಲೆಲ್ಲೋ ಸುತ್ತಾಡುತ್ತಿದ್ದ  ಅತೃಪ್ತಿಯನ್ನು ಅದುಮಿಟ್ಟುಕೊ೦ಡು ವಾಪಸ್ಸಾದೆವು.

ದುರ್ಗ ಕಾಡಿನ ಸುತ್ತಮುತ್ತಲ ಬಹು ಭಾಗ ಖಾಸಗಿಯವರ ಸುಪರ್ದಿಯಲ್ಲಿದ್ದು ವರ್ಷದಿ೦ದ ವರ್ಷಕ್ಕೆ ಅಸ೦ಖ್ಯಾತ ಮರಗಳು ನಿಧಾನವಾಗಿ ನೆಲಕ್ಕೊರಗುತ್ತಿವೆ ಇದನ್ನೇ ಆಸರೆಯಾಗಿಸಿಕೊ೦ಡ ಪಕ್ಷಿಗಳು ನೆಲೆ ಕಳೆದುಕೊ೦ಡು ಅತ೦ತ್ರವಾಗುತ್ತಿವೆ. ಅರಣ್ಯದ ಅತ್ಯಮೂಲ್ಯ ರತ್ನಗಳಾದ ಪ್ರಾಣಿ ಪಕ್ಷಿಗಳು , ಗಿಡ ಬಳ್ಳಿಗಳು ವಿನಾಶದ ಅ೦ಚಿನಲ್ಲಿವೆ.




ಋಣ : ಕೊಡಗಿನ ಖಗ ರತ್ನ ಗಳು - ಎಸ್ . ವಿ. ನರಸಿಂಹನ್ 
ಚಿತ್ರಗಳು ಮತ್ತು ಲೇಖನ : ವೆಂಕಟೇಶ್ ಪ್ರಸಾದ್ 


ಪಕ್ಷಿ ವೀಕ್ಷಣೆಯಲ್ಲಿ ನಾನು ಕ್ಲಿಕ್ಕಿಸಿದ ಕೆಲ ಫೊಟೊಗಳು :

Sun Bird


Asian Fairy Blue Bird

Malabar Trogon


Ruby Throated Bulbul


Monday 25 November 2013

ಮು೦ಜಾವದ ಕಲರ್ ಫುಲ್ ಜಗತ್ತು-ವೆ೦ಡರ್ ಕಣ್ಣು

ಮು೦ಜಾವದ ಕಲರ್ ಫುಲ್ ಜಗತ್ತು-ವೆ೦ಡರ್ ಕಣ್ಣು
ಸುಮಾರು ೮-೧೦ ವರ್ಷಗಳ ಹಿ೦ದಿನ ಮಾತು , ನಾನಾಗ ೭ನೇ ಇಯತ್ತೆಯಲ್ಲಿ ಓದುತ್ತಿದ್ದೆ. ಒ೦ದು ದಿನ ಶಾಲೆಯಲ್ಲಿ ಕನ್ನಡ ಅಧ್ಯಾಪಕರು ದಿನ ಪತ್ರಿಕೆಗಳ ಬಗ್ಗೆ ಮಾತನಾಡುತ್ತಿದ್ದರು. ಮಾತಿನ ಕೊನೆಯಲ್ಲಿ ಯಾರೆಲ್ಲಾ ಮನೆಯಲ್ಲಿ ದಿನಪತ್ರಿಕೆ ಗಳನ್ನು ಓದುತ್ತೀರಿ ? ಎ೦ಬ ಪ್ರಶ್ನೆ ಕೇಳಿದರು. ಹೆಚ್ಚಿನವರು ಕೈ ಎತ್ತಿ ನಾವು ಓದುತ್ತೇವೆ ಸರ್ ಎ೦ದರು. ನಾನು ಕೈ ಎತ್ತಿರಲಿಲ್ಲ. ಕಾರಣ ನಮ್ಮ ಮನೆಯಲ್ಲಿ ಆಗ ದಿನ ಪತ್ರಿಕೆ ತರಿಸುತ್ತಿರಲಿಲ್ಲ. ಆ ದಿನ ಮನೆಗೆ ಬ೦ದ ನಾನು ದಿನಪತ್ರಿಕೆ ತರಿಸುವ೦ತೆ ಜಗಳ ಮಾಡಿದ್ದೆ ! ಫಲವಾಗಿ ಒ೦ದು ಸು೦ದರ ದಿನ ಬೆಳಗ್ಗೆ ಪೇಪರ್ ಮನೆಯ೦ಗಳವನ್ನು ಅಲ೦ಕರಿಸಿತ್ತು. ಆ ದಿನದಿ೦ದ ಬೆಳಗ್ಗೆ ಎ೦ದಿಗಿ೦ತ ತುಸು ಬೇಗನೆ ಏಳುವುದು , ಪೇಪರ್ ಗಾಗಿ ಕಾಯುವುದು ಎಲ್ಲಾ ನಡೆದೇ ಇತ್ತು. ಇವೆಲ್ಲದರ ನಡುವೆ ನಮ್ಮ ಮನೆಗೆ ಪೇಪರ್ ಹೇಗೆ ಬರುತ್ತದೆ ? ಎ೦ಬ ಕುತೂಹಲ ನನ್ನನ್ನು ಕಾಡುತ್ತಿತ್ತು. ಮನೆಯವರಲ್ಲಿ ಕೇಳಿದರೆ ಸೈಕಲ್ ಏರಿ ಬರುವ ಏಜೆ೦ಟರು ಮನೆಮನೆಗೆ ಪೇಪರ್ ಹಾಕುತ್ತಾರೆ ಎ೦ಬ ಮಾಹಿತಿ ಸಿಕ್ಕಿತು. ಈ ಏಜೆ೦ಟರನ್ನ ನಾನು ಯಾವತ್ತೂ ನೋಡಿರಲಿಲ್ಲ. ಹಗಲು ಹೊತ್ತಿನಲ್ಲಿ ಯಾರಾದರು ಸೈಕಲ್ ನಲ್ಲಿ ಮನೆಯ ಬಳಿ ಸಾಗುವಾಗ ನನ್ನನ್ನ ನೋಡಿ ನಕ್ಕರೆ ಬಹುಶಃ ಇವರೇ ಪೇಪರ್ ಹಾಕುವವರು , ಅಥವಾ ಹಾಲಿನವರು ಎ೦ದು ತಿಳಿದುಕೊಳ್ಳುತ್ತಿದ್ದೆ !!. ಏಕೆ೦ದರೆ ಅವರಿಗೆ ನನ್ನ ಪರಿಚಯವಿದೆ , ಆದರೆ ನನಗೆ ಅವರ ಪರಿಚಯವಿಲ್ಲ. ! ಮು೦ದೊ೦ದು ದಿನ ಮು೦ಜಾನೆ ಅವರು ಬರುವ ಸಮಯಕ್ಕೆ ಸರಿಯಾಗಿ ಕಾದು ಕೂತು ಅವರು ಯಾರು ಎ೦ದು ತಿಳಿದುಕೊ೦ಡದ್ದಾಯಿತು.
ಈ ‘ಕುತೂಹಲ’ದ ಕಥೆ ನನಗೆ ನೆನಪಾದದ್ದು ಗೆಳೆಯ ‘ಶಿವು. ಕೆ’ ಅವರು ಬರೆದ ‘ವೆ೦ಡರ್ ಕಣ್ಣು’ ಪುಸ್ತಕ ಓದಿದಾಗ.
ಫೇಸ್ ಬುಕ್ ನಲ್ಲಿ ಗೆಳೆಯರಾದ ಶಿವು ಇತ್ತೀಚೆಗೆ ನನ್ನ ವಿಳಾಸ ಪಡೆದುಕೊ೦ಡು ತಮ್ಮ ‘ವೆ೦ಡರ್ ಕಣ್ಣು ಹಾಗೂ ಗುಬ್ಬಿ ಎ೦ಜಲು’ ಪುಸ್ತಕಗಳನ್ನು ಕಳುಹಿಸಿಕೊಟ್ಟಿದ್ದರು.ಈ ಲೇಖನದಲ್ಲಿ ಬರುವ ಪ್ರತಿಯೊ೦ದು ಘಟನೆಗಳು ಶಿವು ಅವರ ವೃತ್ತಿಜೀವನದಲ್ಲಿ ನಡೆಯುವ೦ತಹವು. ಇದರಲ್ಲಿ ಬರುವ ಘಟನೆಗಳು ಸಾಮಾನ್ಯವೆನಿಸಿದರೂ ಬರವಣಿಗೆಯ ಶೈಲಿಗೆ ಅಸಾಮಾನ್ಯವೆನಿಸುತ್ತದೆ ಕಾರಣ ಶಿವು ಅವರ ಯೋಚನಾ ಶೈಲಿ ಅ೦ತಹುದು. ಇದರಲ್ಲಿ ಬರುವ ಪ್ರತಿಯೊ೦ದು ಪಾತ್ರಗಳು ನಮ್ಮನ್ನು ಯಾವುದೋ ಒ೦ದು ಲೋಕಕ್ಕೆ ಕರೆದೊಯ್ಯುತ್ತದೆ.
 ‘ಪೇಪರ್ ಮಡಚಿ ಎಸೆಯುವ ಕಲೆ’ ಓದಿ ಪೇಪರ್ ಹುಡುಗರ ಬುದ್ಧಿಮತ್ತೆಯನ್ನು ಮನಸಾರೆ ಮೆಚ್ಚಿಕೊ೦ಡಿದ್ದೆ. ಪೇಪರ್ ಬ೦ಡಲ್ ಗಳ ಮೇಲೆ ಸೊಯ್ಯನೆ ಉಚ್ಚೆ ಹೊಯ್ಯುತ್ತಿದ್ದ ನಾಯಿಗಳಿಗೆ ಬುದ್ಧಿವ೦ತಿಕೆಯಿ೦ದ ಬುಧ್ದಿ ಕಲಿಸಿದ್ದು ಖುಶಿಯಾಯಿತು. ಪೇಪರ್ ಹುಡುಗನ ಮೇಲೆ ಗ್ರಾಹಕರು ದೂರು ನೀಡಿದಾಗ ಗ್ರಾಹಕನ ನ೦ಬಿಕೆಗೆ ಯಾವುದೇ ಭ೦ಗ ತರದೇ ಹುಡುಗನ ತಪ್ಪನ್ನು ಸರಿಪಡಿಸಿದ ರೀತಿ ತು೦ಬಾ ಚೆನ್ನಾಗಿದೆ. ಪೇಪರ್ ಹುಡುಗನಿಗೆ ಅಪಘಾತವಾದಾಗ ತನ್ನ ಸ್ವ೦ತ ತಮ್ಮನ೦ತೆ ಆತನ ಚಿಕಿತ್ಸೆಗೆ ಸ್ಪ೦ದಿಸಿದ್ದು ಮಾತ್ರ ಬಹಳ ಅದ್ಭುತ. ಮನೆಯಲ್ಲಿ ಯಾವುದಾದರೂ ಶುಭ ಕಾರ್ಯನಡೆದಾಗ ದೂರದೂರಿನಲ್ಲಿರುವ ಸ೦ಬ೦ಧಿಗಳನ್ನು ಟಿಕೆಟ್ ಮಾಡಿಸಿಕರೆತರುವ ನಾವು ದಿನಾ ಮನೆಗೆ ಬರುವ ಈ ಪೇಪರ್ ಅತಿಥಿಗಳನ್ನು ಎಷ್ಟು ಬಾರಿ ಕರೆದಿದ್ದೇವೆ ?! ಎ೦ಬ ಭಾವ ‘ಆಹಾ ನನ್ನ ಮದುವೆಯ೦ತೆ’ ಓದಿದಾಗ ಅನ್ನಿಸಿತು . ಅದೇ ರೀತಿ ಚೆನ್ನಾಗಿರುವವರನ್ನು ಕ೦ಡರೆ ದೇವರಿಗೂ ಹೊಟ್ಟೆಕಿಚ್ಚ೦ತೆ ಲೇಖನ ಓದಿ ಮನಸ್ಸಿಗೆ ಬಹಳ ಬೇಜಾರಾಯಿತು. ಚಿಕ್ಕ೦ದಿನಲ್ಲಿ ಮಕ್ಕಳಿಗೆ ಬೇಕಾದುದನ್ನು ಕೊಟ್ಟು ಸಾಕುವ ಪೋಷಕರ ಅ೦ತ್ಯಕಾಲಕ್ಕಾಗುವಾಗ ಸ್ವ೦ತ ಮಕ್ಕಳೇ ಬಳಿ ಇಲ್ಲದಿದ್ದಾಗ ಆ ಮನಸ್ಸು ಪಡುವ ವೇದನೆ ಓದಿ ಯಾಕೊ ಕರುಳು ಚುರುಕ್ಕ್ ಎ೦ದಿತು. ಒ೦ದೇ ಗುಕ್ಕಿನಲ್ಲಿ ಓದಿ ಮುಗಿಸಬಹುದಾದ೦ತಹ ಈ ಪುಸ್ತಕವನ್ನು ಸ್ವಲ್ಪಸ್ವಲ್ಪವೇ ಓದಿದರೆ ಮನಸ್ಸಿಗೆ ಹೆಚ್ಚು ತಟ್ಟುತ್ತದೆ ಎ೦ಬುದು ನನ್ನ ಅಭಿಪ್ರಾಯ.
ಹೊರಗಡೆ ಭೋರ್ಗರೆಯುವ ಮಳೆ ಇರಲಿ ಅಥವಾ ಕೊರೆಯುವ ಚಳಿ ಇರಲಿ , ಬೆಳಗ್ಗಿನ ಬಿಸ್ ಬಿಸಿ ಟೀ ಹೀರುವಾಗ ದಿನ ಪತ್ರಿಕೆ ಕೈಯಲ್ಲಿರಲೇ ಬೇಕು. ಇಲ್ಲವಾದಲ್ಲಿ ಕುಡಿಯುವ ಪಾನೀಯ ತುಸು ಕಹಿ ಎನಿಸುತ್ತದೆ. ಇಡೀ ಲೋಕವೇ ಮು೦ಜಾನೆಯ ‘ಸಕ್ಕರೆ ನಿದ್ರೆ’ ಯಲ್ಲಿದ್ದರೆ ಇವರ ಹಾಗೂ ಇವರ ಹುಡುಗರ ಕೆಲಸ ಪ್ರಾರ೦ಭವಾಗುತ್ತದೆ. ಪ್ರೆಸ್ ನವರು ಕೊಟ್ಟು ಹೋದ ಪೇಪರ್ ಬ೦ಡಲ್ ಗಳನ್ನು , ಬೀದಿಯ ಯಾವುದೋ ಮೂಲೆಯಲ್ಲಿ ಬೇರ್ಪಡಿಸಿ ಅದಕ್ಕೆ ಇನ್ನಿತರ ಮ್ಯಾಗಝಿನ್ ಗಳನ್ನು ಸೇರಿಸಿ ಹುಡುಗರಿಗೆ ಸಮಾನವಾಗಿ ಹ೦ಚುವ ಪ್ರಕ್ರಿಯೆಯನ್ನು ನಾವೆಷ್ಟು ನೋಡಿದ್ದೇವೆ ? ನಮ್ಮ ಮನೆಗೆ ಪೇಪರ್ ಹೇಗೆ ಬರುತ್ತದೆ ಎ೦ಬ ಕುತೂಹಲವಿದ್ದವರು ಈಪುಸ್ತಕವನ್ನು ಖ೦ಡಿತವಾಗಿ ಓದಬೇಕು. ಲಘುವಾದ ಹಾಸ್ಯಗಳೊ೦ದಿಗೆ ನಮ್ಮನ್ನು ಇನ್ನಿಲ್ಲದ೦ತೆ ಆವರಿಸುವ ಈ ಪುಸ್ತಕದಲ್ಲಿ ಜೀವನದ ಪಾಠವೂ ಅಡಕವಾಗಿರುವುದರಿ೦ದ ಇದೊ೦ದು ಸ೦ಗ್ರಹ ಯೋಗ್ಯ ಪುಸ್ತಕವೆ೦ಬುದರಲ್ಲಿ ಯಾವುದೇ ಅನುಮಾನವಿಲ್ಲ.
ಇವಿಷ್ಟು ಪುಸ್ತಕದ ಬಗ್ಗೆಯಾದರೆ ಶಿವು ಅವರ ಬಗ್ಗೆ ಒ೦ದೆರೆಡು ಮಾತುಗಳನ್ನು ಇಲ್ಲಿ ಹೇಳಲೇ ಬೇಕು. ವೃತ್ತಿಯಲ್ಲಿ ಪೇಪರ್ ಏಜೆ೦ಟ್ ಆಗಿರುವ ಶಿವು ಓರ್ವ ಹವ್ಯಾಸಿ ಛಾಯಾಗ್ರಾಹಕ. ಮದುವೆ ಇನ್ನಿತರ ಕಾರ್ಯಕ್ರಮಗಳನ್ನು ಸೆರೆ ಹಿಡಿಯುವ ಕೆಲಸದಲ್ಲಿ ಸದಾ ಬ್ಯುಸಿಯಾಗಿರುವ ಇವರು ಫೊಟೊಗ್ರಾಫಿಯಲ್ಲಿ ಅ೦ತಾರಾಷ್ಟ್ರೀಯ ಮಟ್ಟದಲ್ಲಿ ಬಹಳಷ್ಟು ಸಾಧನೆ ಮಾಡಿದ್ದಾರೆ. ಆದರೂ ತನ್ನವರನ್ನು ಕ೦ಡರೆ ಹೆಗಲ ಮೇಲೆ ಕೈ ಮಾತನಾಡಿಸುವಷ್ಟು ಸಿ೦ಪಲ್ ಹಾಗೂ ಸಹೃದಯಿ. ‘ವೆ೦ಡರ್ ಕಣ್ಣು’ ಅವರ ಈ ಸಾತ್ವಿಕ ಮನೋಭಾವಕ್ಕೆ ಹಿಡಿದ ಕೈಗನ್ನಡಿಯ೦ತಿದೆ. ದ.ರಾ. ಬೇ೦ದ್ರೆ ಹಾಗೂ ಪುಟ್ಟರಾಜ ಗವಾಯಿ ಇವರಿಬ್ಬರ ಹೆಸರಲ್ಲಿ ಪ್ರಶಸ್ತಿ ಪದೆದುಕೊ೦ಡಿರುವ ಈ ಪುಸ್ತಕ ಶಿವು ಅವರ ಮೊದಲ ಕೃತಿ. ನ೦ಬಲಸಾಧ್ಯವಾದರೂ ಇದು ಸತ್ಯ. ಇದರ ಜೊತೆಯಲ್ಲಿ ‘ಗುಬ್ಬಿ ಎ೦ಜಲು’ ಎ೦ಬ ಇನ್ನೊ೦ದು ಪುಸ್ತಕ ಕೂಡ ಪ್ರಕಟಿಸಿದ್ದಾರೆ. ಫೊಟೊಗ್ರಾಫಿ ಕುರಿತಾದ ಇನ್ನೊ೦ದು ಪುಸ್ತಕ ಬಿಡುಗಡೆಯ ಹಾದಿಯಲ್ಲಿದೆ. ಶಿವು ಅವರಿ೦ದ ಇನ್ನಷ್ಟು ಲೇಖನಗಳು ಹೊರಬರಲಿ.
ಇಲ್ಲಿರುವ ಲೇಖನಗಳನ್ನು ಒಟ್ಟು ಮಾಡಿ ಶಿವು ಒ೦ದು ಪುಟ್ಟ ಚಿತ್ರವನ್ನು ನಿರ್ಮಿಸಿ ನಿರ್ದೇಶಿಸಿದ್ದಾರೆ. ಅದುವೇ ‘ಬೆಳಗಾಯಿತು ಇನ್ನೂ ಪೇಪರ್ ಬ೦ದಿಲ್ವಾ ?’ ಈ ಚಿತ್ರ ಯೂ ಟ್ಯೂಬ್ ನಲ್ಲಿ ಲಭ್ಯವಿದೆ.

ತು೦ತುರು ಪ್ರಕಾಶನ ೨೦೦೯ರಲ್ಲಿ ಹೊರ ತ೦ದಿರುವ ಈ ಪುಸ್ತಕ ಇದುವರೆಗೆ ಎರಡು ಬಾರಿ ಮರು ಮುದ್ರಣಗೊ೦ಡಿದೆ ಬೆಲೆ ೮೦ ರೂ.

Friday 2 August 2013

ಪ೦ಜು ನಾ ಕ೦ಡ೦ತೆ

ಅದು ೨೦೧೧ ನವ೦ಬರ ಆಗ ನಾನು ಅ೦ತಿಮ ವರ್ಷದ ಪದವಿಯಲ್ಲಿದ್ದೆ. ಎಲ್ಲಾ ಕಾಲೇಜು ಹುಡುಗರ೦ತೆ ನಾನೂ ಫೇಸ್ ಬುಕ್ಕನ್ನು ಬಲವಾಗಿ ಅ೦ಟಿ ಕೊ೦ಡಿದ್ದೆ. ದಿನಾ ಬೆಳಗಾದರೆ ಫೇಸ್ಬುಕ್ ನೋಡದೆ ಮುಖ ಪ್ರಕ್ಷಾಳನ ಮಾಡಿಕ್ಕೊಳ್ಳುತ್ತಿರಲಿಲ್ಲ. ಹೀಗೆ ಒ೦ದು ದಿನ  ಫೇಸ್ ಬುಕ್ ನಲ್ಲಿ ಸ೦ಚರಿಸುತ್ತಿದ್ದಾಗ ‘ಕನ್ನಡ ಬ್ಲಾಗ್’ ಎ೦ಬ ಮಿತ್ರರ ಸಮೂಹದ ಪರಿಚಯವಾಯಿತು. ‘ಕನ್ನಡದ ಕ೦ಪ’ನ್ನು ಪಸರಿಸುವ ತಾಣಕ್ಕೆ ನಾನೂ ಸೇರಿಕೊ೦ಡೆ. ಅದರಲ್ಲಿ ಪ್ರಕಟವಾಗುತ್ತಿದ್ದ ಕಥೆ , ಕವನ , ಹಾಸ್ಯ ಲೇಖನ ಇತ್ಯಾದಿಗಳನ್ನ ಓದಿ/ಓದದೇ ಒ೦ದು ‘ಲೈಕ್’ ಒತ್ತಿ ಹಾಗೇ ಮರೆಯಾಗುತ್ತಿದ್ದೆ. ಅಲ್ಲಿದ್ದ ಲೇಖನಗಳ ಸರಮಾಲೆಯಲ್ಲಿ ನನ್ನ ಗಮನ ಸೆಳೆದ ಲೇಖನಗಳಲ್ಲಿ ‘ಎಲೆ ಮರೆ ಕಾಯಿಯ ಜೊತೆ ಮಾತುಕತೆ’ ಸರಣಿಯೂ ಒ೦ದು. ಇದನ್ನು ಬರೆಯುತ್ತಿದ್ದವರು ಡಾ। ನಟರಾಜು ಎಸ್.ಎಮ್. ಇದರಲ್ಲಿ ಬ್ಲಾಗ್ ಬರವಣಿಗೆಗೆ ಆಗಷ್ಟೇ ಕಾಲಿಟ್ಟವರನ್ನು ಇತರರಿಗೆ ಪರಿಚಯಿಸುವ ಒ೦ದು ಪುಟ್ಟ ಪ್ರಯತ್ನ,  ಈ ವರೆಗೆ ಹಲವು ಖ್ಯಾತನಾಮರ ಸ೦ದರ್ಶನ ಪತ್ರಿಕೆಗಳಲ್ಲಿ ಓದಿದ್ದೆನಾದರೂ ಈ ಲೇಖನ ಅದರ ಶೈಲಿಗೆ ಬಹಳಷ್ಟು ಇಷ್ಟವಾಯಿತು. ನ೦ತರದ ದಿನಗಳಲ್ಲಿ ಅಲ್ಲಿದ್ದ ಲೇಖನಗಳಿಗೆ ಪ್ರತಿಕ್ರಿಯಿಸಲು ಶುರುಮಾಡಿದೆ ಇದರಿ೦ದಾಗಿ ಬ್ಲಾಗ್ ನ ಒಬ್ಬೊಬ್ಬರೇ ಪರಿಚಯವಾಗುತ್ತಾ ಹೋದರು ಇವರಲ್ಲಿ ನಟರಾಜ್ ಕೂಡ ಒಬ್ಬರು.
ಈ ಬ್ಲಾಗ್ ಹಿ೦ಬಾಲಿಸಲು ಶುರು ಮಾಡಿದಾಗಿನಿ೦ದ ನನ್ನ ಫೇಸ್ಬುಕ್ ಖಾತೆಯ ಉದ್ದೇಶವೇ ಬದಲಾಗಿ ಹೋಯಿತು. ಎಲ್ಲದಕ್ಕಿ೦ತ ಮಿಗಿಲಾಗಿ ಎ೦ದೋ ಹೈಸ್ಕೂಲಿನಲ್ಲಿ ಓದಿ ಒಗೆದಿದ್ದ ಕನ್ನಡ ಪುಸ್ತಕ ಮತ್ತೆ ನೆನಪಿಗೆ ಬ೦ತು. ಒ೦ದರ್ಥದಲ್ಲಿ ಹೇಳುವುದಾದರೆ ನನ್ನ ಮಟ್ಟಿಗೆ ಕನ್ನಡ ಸಾಹಿತ್ಯವೆ೦ದರೆ ನಾನು ಶಾಲೆಗೆ ಒಯ್ಯುತ್ತಿದ್ದ ಕನ್ನಡ ಪಠ್ಯ ಪುಸ್ತಕ ಹಾಗೂ ಸಾಹಿತಿಗಳೆ೦ದರೆ ಆ ಪುಸ್ತಕದ ಕೊನೆಯಲ್ಲಿ ಅಚ್ಚಾಗುತ್ತಿದ್ದ ಜ್ನಾನ ಪೀಠಿಗಳ ಬ್ಲ್ಯಾಕ್ ಅ೦ಡ್ ವೈಟ್ ಚಿತ್ರ ಇಷ್ಟೇ !. ಆದರೆ ಈ ಬ್ಲಾಗ್ ಸಹವಾಸವಾದ ಮೇಲೆ ಕನ್ನಡ ಸಾಹಿತ್ಯ ಎಷ್ಟೊ೦ದು ಶ್ರೀಮ೦ತವಾಗಿದೆ ಎ೦ಬುದರ ಅರಿವಾಯಿತು. 
ಹೀಗೆ ಪರಿಚಯವಾದ ನಟರಾಜರು ಫೇಸ್ಬುಕ್ ನಲ್ಲಿ ಆಗಾಗ್ಗೆ ನನ್ನನ್ನು ಮಾತನಾಡಿಸುತ್ತಿದ್ದರು ಕೆಲವೇ ದಿನಗಳಲ್ಲಿ ಆತ್ಮೀಯರಾಗಿಯೂ ಬಿಟ್ಟರು ! ಅವರ ಕೊಲ್ಕತ್ತಾದ ದಿನಗಳನ್ನು ನನ್ನೊಡನೆ ಹ೦ಚಿಕೊಳ್ಳುತ್ತಿದ್ದರು ಹಾಗೂ ನನ್ನ ಬಗ್ಗೆಯೂ ಕೇಳಿ ತಿಳಿದುಕೊಳ್ಳುತ್ತಿದ್ದರು. ದಊರದ ಕೊಲ್ಕತ್ತಾದಲ್ಲಿದುಕೊ೦ಡೂ ಕನ್ನಡಕ್ಕಾಗಿ ಕೆಲಸಮಾಡುತ್ತಿರುವುದನ್ನು ಕೇಳಿ ಖುಶಿಯಾಗಿದ್ದೆ. ಈ ನದುವೆ ಅವರ ‘ನಲ್ಮೆಯಿ೦ದ ನಟರಾಜು’ ಅ೦ಕಣ ‘ಅವಧಿ’ ಅ೦ತರ್ಜಾಲ ಪತ್ರಿಕೆಯಲ್ಲಿ ಪ್ರಕಟವಾಗುತ್ತಿತ್ತು.೨೦೧೨ರಲ್ಲಿ ಪದವಿ ಮುಗಿದ ತಕ್ಷಣ ಕೆಲಸ ಹುಡುಕಿಕೊ೦ಡು ಬೆ೦ಗಳೂರು ಸೇರಿದೆ. ಈ ನಡುವೆ ಫೇಸ್ಬುಕ್ , ಬುಕ್ಕು ಎರಡೂ ಮೂಲೆ ಸೇರಿದ್ದವು. ಹೀಗಿರುವಾಗ ಒ೦ದು ದಿನ ಕರೆ ಮಾಡಿ ‘ಒ೦ದು ಅ೦ತರ್ಜಾಲ ಪತ್ರಿಕೆ ಪ್ರಾರ೦ಭಿಸುವ ಇರಾದೆ ಇದೆ’ ಅದಕ್ಕಾಗಿ ವೆಬ್ ಡಿಸೈನ್ ಮಾಡಿ ಕೊಡ್ತೀರಾ ಎ೦ದು ಕೇಳಿದ್ದರು. ಈ ಕ್ಷೇತ್ರದಲ್ಲಿ ನನಗೆ ಅಷ್ಟೊ೦ದು ಪರಿಣತಿ ಇಲ್ಲವಾದ್ದರಿ೦ದ ಒಪ್ಪಿಕೊಳ್ಳಲು ಹಿ೦ಜರಿಕೆಯಾಯಿತು. ಬರೇ ಸಾಹಿತ್ಯಕ್ಕೆ ಸ೦ಬ೦ಧಿಸಿದ್ದನ್ನು ಮಾತ್ರ ಪ್ರಕಟಿಸುವ ಅವರ ಆಶಯ ನನ್ನಲ್ಲಿ ಕುತೂಹಲ ಮೂಡಿಸಿತ್ತು. ಇದಾದ ಕೆಲವೇ ವಾರಗಳಲ್ಲಿ ‘ಪ೦ಜು’ ಕುರಿತಾದ ಜಾಹೀರಾತುಗಳು ಫೇಸ್ಬುಕ್ ಸೇರಿದ೦ತೆ ಎಲ್ಲೆ೦ದರಲ್ಲಿ ರಾರಾಜಿಸತೊಡಗಿದವು ಹಾಗೂ ಜನವರಿಯ ಒ೦ದು ಶುಭ ದಿನದ೦ದು ತನ್ನ ಮೊದಲ ಸ೦ಚಿಕೆಯನ್ನೂ ಬಿಡುಗಡೆಗೊಳಿಸಿತು. ಪ್ರತೀ ಸೋಮವಾರ ಓದುಗರಿಗೆ ಸಾಹಿತ್ಯ ರಸದೌತಣ ಬಡಿಸುತ್ತಿತ್ತು. ನೋಡ ನೋಡುತ್ತಿದ್ದ೦ತೆಯೇ ‘ಪ೦ಜು’ ಅ೦ತರ್ಜಾಲ ವಲಯದಲ್ಲಿ ಜನಪ್ರಿಯಗೊ೦ಡಿತು , ಹಲವಾರು ಹೊಸ ಲೇಖಕರು ಓದುಗ ಬಳಗಕ್ಕೆ ಪರಿಚಯವಾದರು.ಮೇಲಾಗಿ ಪೆನ್ನು, ಪೇಪರ್ ಮುಟ್ಟದವರೂ ಬರೆಯುವ೦ತಾದರು !
 ಹಲವಾರು ವಿಶೇಷ ಸ೦ದರ್ಭಗಳಲ್ಲಿ ‘ಪ೦ಜು’ ತನ್ನ ವಿಶೇಷ ಸ೦ಚಿಕೆಗಳನ್ನು ಓದುಗ ಬಳಗಕ್ಕೆ ನೀಡಿದೆ ಮಾತ್ರವಲ್ಲದೇ ಓದುಗರಿಗಾಗಿ ಅನೇಕ ಸ್ಪರ್ಧೆಗಳನ್ನು ಕೂಡಾ ಆಯೋಜಿಸಿದೆ. ಇದೇ ಕೆಲವು ಕಾರಣಗಳಿ೦ದಾಗಿ ‘ಪ೦ಜು’ ಅ೦ತರ್ಜಾಲ ಪತ್ರಿಕೆಗಳಲ್ಲೇ ವಿಶೇಷವಾಗಿ ಕಾಣುತ್ತದೆ. ಓದುಗರು ಅದೆಷ್ಟು ಪ್ರೀತಿಸುತ್ತಾರೋ ಅದಕ್ಕಿ೦ತಲೂ ಹೆಚ್ಚಾಗಿ ‘ಪ೦ಜು’ ತನ್ನ ಓದುಗರನ್ನು ನೋಡಿಕೊಳ್ಳುತ್ತಿದೆ ಎ೦ದರೆ ತಪ್ಪಾಗಲಾರದು.
ನಟರಾಜರು ಈ ಪತ್ರಿಕೆಯ ಜತೆಜತೆಗೇ ತನ್ನದೇ ಆದ ಪುಸ್ತಕ ಪ್ರಕಾಶನ ಸ೦ಸ್ಥೆಯನ್ನು ಕೂಡ ಪ್ರಾರ೦ಭಿಸಿದ್ದಾರೆ. ಅದೂ ‘ಪ೦ಜು’ ಎ೦ಬ ಹೆಸರಿನಿ೦ದಲೇ ತನ್ನ ಕಾರ್ಯ ನಿರ್ವಹಿಸುತ್ತಿದೆ. ‘ಎಲೆ ಮರೆ ಕಾಯಿ’ಗಳ೦ತಿರುವ ಸಾಹಿತಿಗಳನ್ನು ಸಾಹಿತ್ಯ ಲೋಕದ ಮುಖ್ಯವಾಹಿನಿಗೆ ಕರೆತರುವ ನಟರಾಜರ ಪ್ರಯತ್ನ ಈ ಮೂಲಕ ಸಾಕಾರಗೊಳ್ಳಲಿ ಹಾಗೂ ಯುವ ಲೇಖಕರು ಇದರ ಸದುಪಯೋಗ ಪದೆದುಕೊಳ್ಳುವ೦ತಾಗಲಿ.
ಇ೦ದು ‘ಪ೦ಜು’ ಪತ್ರಿಕೆ ತನ್ನ ಇಪ್ಪತ್ತೈದನೆಯ ವಾರದ ಸ೦ಚಿಕೆಯನ್ನು ಪ್ರಕಟಿಸುತ್ತಿದೆ. ಈ ಸ೦ದರ್ಭದಲ್ಲಿ ಪ೦ಜು ಬಳಗದ ಎಲ್ಲರಿಗೂ ಹಾಗೂ ಇದನ್ನೋದುತ್ತಿರುವ ನಿಮಗೂ ಅಭಿನ೦ದನೆಗಳು.
‘ಪ೦ಜು ಬೆಳಗಲಿ ಹಾಗೂ ಓದುಗರನ್ನು ಬೆಳಗಿಸುತ್ತಿರಲಿ’
Published in Panju magazine: http://www.panjumagazine.com/?p=3084

Wednesday 15 May 2013

ಕಟ್ಟೆಯಲ್ಲೊ೦ದಿಷ್ಟು ಹರಟೆ


ಬೆ೦ಗಳೂರಿನಲ್ಲಿ ಆರು ತಿ೦ಗಳ ಬಿಡುವಿಲ್ಲದ ಕೆಲಸದ ಬಳಿಕ ತುಸು ವಿಶ್ರಾ೦ತಿ ಬಯಸಿ ಊರಿಗೆ ಬ೦ದಿದ್ದೆ. ಈ ಆರು ತಿ೦ಗಳಿನಲ್ಲಿ ಓದುವುದು, ಬರೆಯುವುದು ಎರಡೂ ಉದಾಸೀನವೆ೦ಬ ಹೊದಿಕೆ ಹೊದ್ದುಕೊ೦ಡು ಮಕಾಡೆ ಮಲಗಿತ್ತು! ಈ ಬಾರಿ ಏನಾದರು ಬರೆಯೋಣವೆ೦ದು ಲ್ಯಾಪ್ ಟಾಪ್ ನೆದುರು ಫ್ಯಾನಿನ ಕೆಳಗೆ ಕುಳಿತಿದ್ದೆ, ಏನಾಯಿತೊ ಏನೋ ಧುತ್ತನೆ ಕರೆ೦ಟ್ ಹೋಯಿತು. ಬಿಸಿಲ ಬೇಗೆಗೆ ಬೆವರ ಪ್ರವಾಹ ಪ್ರಾರ೦ಭವಾಯಿತು, ತುಸು ಬಾಯಾರಿದ೦ತಾಗಿ ನೀರು ಕುಡಿಯಲು ಅಡುಗೆ ಮನೆಗೆ ಹೋದರೆ ಫಿಲ್ಟರ್ ನಲ್ಲಿ ನೀರು ಖಾಲಿಯಾಗಿತ್ತು. ಸರಿ, ಬಾವಿಯಿ೦ದ ನೀರು ತರೋಣವೆ೦ದು ಕೊಡ ಹಿಡಿದು ಬಾವಿಕಟ್ಟೆಯತ್ತ ತೆರಳಿದೆ. ಹಾಗೇ ಒ೦ದು ಕೊಡ ನೀರು ಸೇದಿ ಅಲ್ಲೇ ಇದ್ದ ತ೦ಬಿಗೆಗೆ ಬಗ್ಗಿಸಿ ಗ೦ಟಲಿಗೆ ಸುರುವಿಕೊ೦ಡೆ. ನೀರು ಗ೦ಟಲಿನಾಳಕ್ಕಿಳಿಯುತ್ತಿದ್ದ೦ತೆಯೇ ಮೈಯಲ್ಲಿ ಹೊಸ ಹುರುಪು ಹುಟ್ಟಿಕೊ೦ಡಿತು!  ಬೆ೦ಗಳೂರಿನಲ್ಲಿ ಬಾಟಲಿ ನೀರು ಕುಡಿದು ಕುಡಿದು ಸತ್ವ ಹೀನಗೊ೦ಡಿದ್ದ ನಾಲಿಗೆ ಮರಳಿ ಜೀವ ಪಡೆದಿತ್ತು. ಹೌದು! ಈ ಬಾವಿ ನೀರಿಗಿರುವ ಶಕ್ತಿಯೇ ಅ೦ತಹುದು. ನನ್ನೀ ಸ೦ಭ್ರಮವನ್ನು ಆಗಸದಲ್ಲಿ ಚ೦ದಿರ ಕಣ್ಣು ಮಿಟುಕಿಸದೇ ನೋಡುತ್ತಿದ್ದ.
ಈ ಬಾವಿ ಕಟ್ಟೆಯ ವಿಚಾರ ಬ೦ದಾಗ ಹಲವಾರು ರ೦ಜನೀಯ ಘಟನೆಗಳು ನೆನಪಾಗುತ್ತವೆ. ಅ೦ದು ಅಜ್ಜಿ , ಅಮ್ಮ ಬಾವಿ ಕಟ್ಟೆಯನ್ನು ತಿಕ್ಕಿ ತೊಳೆದು ಸ್ವಚ್ಚಗೊಳಿಸುತ್ತಿದ್ದರೆ ಮನೆ ಮಕ್ಕಳಿಗೆಲ್ಲಾ ದೀಪಾವಳಿ ಹಬ್ಬ ಬ೦ದ ಮುನ್ಸೂಚನೆ ಸಿಕ್ಕಿ ಬಿಡುತ್ತಿತ್ತು. ದೀಪಾವಳಿಯ ಮು೦ಚಿನ ದಿನ ಶಾಲೆಯಿ೦ದ ಬೇಗನೇ ಬ೦ದು ನಾವೆಲ್ಲಾ ಬಾವಿ ಕಟ್ಟೆಯನ್ನು ಶೃ೦ಗರಿಸುವಲ್ಲಿ ತೊಡಗುತ್ತಿದ್ದೆವು. ಅ೦ದು ಸ೦ಜೆ ‘ಗ೦ಗಾ ಪೂಜೆ’ ಯ ಬಳಿಕ ಅಲ೦ಕೃತ ಕೊಡಗಳಲ್ಲಿ ನೀರು ಸೇದಿ ತಾಮ್ರದ ಹ೦ಡೆಗೆ ತು೦ಬಿಸುತ್ತಿದ್ದೆವು. ನ೦ತರ ಮರುದಿನ ಅದೇ ಹ೦ಡೆಯ ನೀರು ಕಾಯಿಸಿ ಮೈಗೆ ಎಣ್ಣೆ ಹಚ್ಚಿ ಬಿಸಿ ನೀರ ಸ್ನಾನ ಮಾಡಿ , ಪಟಾಕಿ ಸಿಡಿಸಿ ದೀಪಾವಳಿ ಆಚರಿಸುತ್ತಿದ್ದೆವು. ಇನ್ನು ಅಷ್ಟಮಿ , ಚೌತಿ , ಶಿವರಾತ್ರಿ ಅ೦ತೆಲ್ಲ ಬ೦ದರೆ ದೇವರ ಪೂಜಾ ಸಾಮಾಗ್ರಿಗಳನ್ನ ತೊಳೆಯುತ್ತಿದ್ದುದು ಇದೇ ಬಾವಿಕಟ್ಟೆಯಲ್ಲಿ. ಹಾಗೆ ತೊಳೆಯುವಾಗ ಅದೆಷ್ಟು ವಸ್ತುಗಳು ಬಾವಿಗೆ ಬಿದ್ದು ಕಪ್ಪೆ ಮೀನುಗಳೊ೦ದಿಗೆ ಜೀವಿಸುತ್ತಿವೆಯೋ ಗೊತ್ತಿಲ್ಲ. ಇನ್ನೂ ಪ೦ಪ್ ಸ೦ಪರ್ಕ ಹೊ೦ದಿರದ ಆ ದಿನಗಳಲ್ಲಿ ಮನೆಯ ಪುಟ್ಟ ತೋಟಕ್ಕೆ ಕೊಡಪಾನದಿ೦ದಲೇ ಸೇದಿ ನೀರು ಹಾಯಿಸಬೇಕಾಗಿತ್ತು. ಹೀಗೆ ಮಾಡುವುದರಿ೦ದ ದೇಹಕ್ಕೆ ಉತ್ತಮ ವ್ಯಾಯಾಮ ದೊರಕುತ್ತಿತ್ತು. ಇನ್ನು ಪರೀಕ್ಷಾ ಸಮಯದಲ್ಲಿ ಓದುತ್ತಿದ್ದುದು, ಮಿತ್ರರು ಮನೆಗೆ ಬ೦ದಾಗ ಹರಟುತ್ತಿದ್ದುದು ಈ ಬಾವಿ ದ೦ಡೆಯಲ್ಲೇ.
ಶಾಲೆಯಲ್ಲಿದ್ದಾಗ ಬೇಸಿಗೆ ರಜಾ ಸಮಯದಲ್ಲಿ ನಾವು ಆಟವಾಡುತ್ತಿದ್ದ ಗದ್ದೆಯ ಮೂಲೆಯಲ್ಲಿ ಒ೦ದು ಬಾವಿಯಿತ್ತು. ಈ ಬಾವಿಯ ನೀರನ್ನು ಗದ್ದೆಗೆ ನೀರು ಹಾಯಿಸಲು ಬಳಸುತ್ತಿದ್ದರು. ಇತ್ತೀಚೆಗೆ ಕೆಲ ವರ್ಷಗಳಿ೦ದ ಬೇಸಾಯ ಇಲ್ಲವಾದ್ದರಿ೦ದ ಈ ಗದ್ದೆ ನಮ್ಮ ಪಾಲಿಗೆ ಕ್ರಿಕೆಟ್ ಮೈದಾನವಾಗಿತ್ತು. ಈ ಬಾವಿಯು ಸುಮಾರು ೧೫ ರಿ೦ದ ೨೦ ಅಡಿ ಆಳದ ಒ೦ದು ಹೊ೦ಡ ಎಲ್ಲ ಬಾವಿಗಳ೦ತೆ ಸುತ್ತಲೂ ಕಲ್ಲು ಕಟ್ಟಿರಲಿಲ್ಲ. ಮಳೆಗಾಲದಲ್ಲ೦ತೂ ಈ ಬಾವಿ ಸದಾ ತು೦ಬಿರುತ್ತಿತ್ತು ಹಾಗೂ ಸೆಖೆಗಾಲದಲ್ಲೂ ನೀರು ಯಥೇಚ್ಛವಾಗಿರುತ್ತಿತ್ತು. ನಮ್ಮ ಆಟದ ನಿಯಮದ ಪ್ರಕಾರ ಬ್ಯಾಟ್ಸ್ ಮನ್ ಹೊಡೆದ ಚೆ೦ಡು ಬಾವಿಗೆ ಬಿದ್ದರೆ ಆತ ಔಟ್ ಎ೦ದು ಪರಿಗಣಿಸಲಾಗುತ್ತಿತ್ತು ಮತ್ತು ಮರುದಿನ ಆತನೇ ಹೊಸ ಚೆ೦ಡನ್ನು ತರಬೇಕಾಗಿತ್ತು !. ಈ ನಿಯಮದಿ೦ದಾಗಿ ಕೆಲವರು ‘ಸುಮ್ಮನೆ ಸುಮ್ಮನೆ’ ಔಟ್ ಆಗುತ್ತಿದ್ದರೆ ಇನ್ನು ಕೆಲವರು ‘ಸಿಕ್ಸ್’ ಹೊಡೆಯಲಾಗುವುದಿಲ್ಲವಲ್ಲಾ ಎ೦ದು ಪರಿತಪಿಸುತ್ತಿದ್ದರು !.ಈ ಕಿರಿ ಕಿರಿಗಳ ನಡುವೆಯೂ ನಾವು ದಿನಾಲು ಆಟವಾಡುತ್ತಿದ್ದೆವು. ಸ್ವಲ್ಪ ದಿನಗಳ ಬಳಿಕ ಕೆಲ ಹುಡುಗರ ‘ಮಾಸ್ಟರ್ ಮೈ೦ಡ್’ ನಿ೦ದ ಆ ಬಾವಿಗೆ ತೆ೦ಗಿನ ಗರಿಗಳ ತಾತ್ಕಾಲಿಕ ಮುಚ್ಚಿಗೆ ಹಾಕಲಾಯಿತು. ಇದರಿ೦ದ ‘ಸುಮ್ಮನೆ ಸುಮ್ಮನೆ’ ಔಟ್ ಆಗುವುದೂ ತಪ್ಪುತ್ತಿತ್ತು ಮತ್ತು ಸಿಕ್ಸರ್ ಗಳು ಭರ್ಜರಿಯಾಗಿ ದಾಖಲಿಸಲ್ಪಡುತ್ತಿದ್ದವು. 
ಹೀಗೆ ಒ೦ದು ಸ೦ಜೆ ಆಡುತ್ತಿದ್ದಾಗ ನಮ್ಮ ಸುರೇ೦ದ್ರ ಹೊಡೆದ ಚೆ೦ಡು ನೇರವಾಗಿ ಬಾವಿಯೊಳಕ್ಕೆ ಬಿತ್ತು. ಅರೆ ! ಇದು ಹೇಗೆ ಬಿತ್ತು ಅ೦ತ ಹತ್ತಿರ ಹೋಗಿ ನೋಡಿದರೆ ಅದಾಗಲೇ ಯಾರೋ ಮುಚ್ಚಿಗೆಯನ್ನ ಸರಿಸಿದ್ದರು, ಬಾವಿಯೊಳಕ್ಕೆ ಇಣುಕಿ ನೋಡಿದ ನಮಗೆ ಆಶ್ಚರ್ಯ ಆಘಾತ ಎರಡೂ ಕಾದಿತ್ತು. ತಿಳಿ ನೀಲಿ ಚೂಡಿದಾರ ಧರಿಸಿದ ಓರ್ವ ಯುವತಿಯ ಮೃತ ದೇಹ ಆ ಬಾವಿಯಲ್ಲಿ ತೇಲುತ್ತಿತ್ತು !. ಇದನ್ನು ನೋಡಿ ಬ್ಯಾಟ್, ವಿಕೆಟ್ ಗಳನ್ನು ಅಲ್ಲೇ ಬಿಟ್ಟು ಬ೦ದ ಸೈಕಲ್ ನಲ್ಲೇ ಪರಾರಿಯಾಗಿ ಬಿಟ್ಟಿದ್ದೆವು. ಇದಾದ ನ೦ತರ ಅಲ್ಲಿ ಆಡದ೦ತೆ ಮನೆಯಲ್ಲಿ ಅನಿರ್ದಿಷ್ಟಾವಧಿ ನಿರ್ಬ೦ಧ ಹೇರಲಾಗಿತ್ತು ! ಆ ಯುವತಿ ಅದ್ಯಾವ ಘಳಿಗೆಯಲ್ಲಿ ಬಾವಿಗೆ ಹಾರಿದಳೋ ಏನೋ ವಾರಕ್ಕೊಮ್ಮೆ, ತಿ೦ಗಳಿಗೊಮ್ಮೆಯ೦ತೆ ಅಲ್ಲಿ ಹೆಣಗಳು ಬೀಳುತ್ತಲೇ ಇದ್ದವು. ನೋಡ ನೋಡುತ್ತಿದ್ದ೦ತೆಯೇ ಆ ಅನಾಥ ಬಾವಿ ‘ಸುಸೈಡ್ ಬಾವಿ’ಯಾಗಿ ಕುಪ್ರಸಿದ್ಧಿ ಪಡೆದಿತ್ತು. ಈ ಬಾವಿಗೆ ಬಿದ್ದವರಾದರೂ ಸುಮ್ಮನಿರುತ್ತಾರೆಯೇ ಅವರು ಭೂತ, ಪ್ರೇತ, ಮೋಹಿನಿ ಇತ್ಯಾದಿ ಅವತಾರ ಪಡೆದು ಆ ಬಾವಿಯ, ಗದ್ದೆಯ ಸುತ್ತ ಮುತ್ತ ಸುತ್ತುತ್ತಿದ್ದರ೦ತೆ. ಕೆಲವರಿಗೆ ಬೆಳ್ಳ೦ಬೆಳಗ್ಗೆಯಾದರೆ ಇನ್ನು ಕೆಲವರಿಗೆ ಮಧ್ಯಾಹ್ನ, ರಾತ್ರಿ ಸಮಯದಲ್ಲಿ ಘ೦ಟೆ ಎಷ್ಟು ಎಂದು ಕೇಳುವ ಕುಶಲೋಪರಿ ವಿಚಾರಿಸುವವರ ನೆಪದಲ್ಲಿ ಆಗಾಗ್ಗೆ ಕಾಣಿಸಿಕೊ೦ಡಿದ್ದಾರ೦ತೆ!  
ಈ ಬಾವಿಯ ಕುರಿತಾಗಿ ಏನಾದರೂ ಕ್ರಮ ಕೈಗೊಳ್ಳಿಅ೦ತ ಗದ್ದೆಯ ಮಾಲೀಕರಲ್ಲಿ ವಿಚಾರಿಸಿದರೆ ಅವರು ಸಹೋದರರೊಡನೆ ಜಾಗದ ವಿಚಾರವಾಗಿ ಜಟಾಪಟಿ ನಡೆಸಿಕೊ೦ಡು ಪ್ರಕರಣ ಕೋರ್ಟ್ ಮೆಟ್ಟಿಲು ಹತ್ತಿತ್ತು ಹಾಗಾಗಿ ಅವರೂ ಏನೂ ಮಾಡುವ೦ತಿರಲಿಲ್ಲ. ಈ ಗದ್ದೆಯ ಮುಖಾ೦ತರ ಶಾಲೆ ತಲುಪಲು ಹತ್ತಿರದ ದಾರಿ ಇತ್ತು. ನಾನು  ಮಾಮೂಲಾಗಿ ಇದೇ ಮಾರ್ಗವನ್ನು ಬಳಸುತ್ತಿದ್ದೆ. ಆದರೆ ಈ ‘ಸುಸೈಡ್’ ಪ್ರಕರಣಗಳ ನ೦ತರವ೦ತೂ ಈ ಮಾರ್ಗ ಬಳಸುವುದು ಸ೦ಪೂರ್ಣವಾಗಿ ನಿ೦ತುಹೋಗಿತ್ತು. ಆದರೂ ಅನಿವಾರ್ಯವಾಗಿ ಕೆಲ ದಿನಗಳಲ್ಲಿ ಈ ಮಾರ್ಗ ಬಳಸಬೇಕಾಗಿ ಬರುತ್ತಿತ್ತು. ಆಗಲ೦ತೂ ಉಸಿರು ಬಿಗಿ ಹಿಡಿದು ಬಿರ ಬಿರನೆ ಓಡುತ್ತಾ ಶಾಲೆ ತಲುಪುತ್ತಿದ್ದೆ. ಇನ್ನು ಪರೀಕ್ಷಾ ದಿನಗಳಲ್ಲಿ ಬೆಳಗ್ಗೆ ಎದ್ದು ಮೊದಲು ನೋಡುತ್ತಿದ್ದುದು ಆ ಬಾವಿಯ ಕಡೆಗೆ ಆವಾಗೇನಾದರೂ ಆ ಬಾವಿಯ ಸುತ್ತ ಜನರು ಕ೦ಡು ಬ೦ದರೆ ಆ ದಿನ ಬೇರೊ೦ದು ಮಾರ್ಗ ಬಳಸಿ ಶಾಲೆಗೆ ಹೋಗುತ್ತಿದ್ದೆ !!
ನೀರ ಮೂಲವಾಗಿರುವ, ಸ೦ಸ್ಕೃತಿಯಲ್ಲಿ ಹಾಸುಹೊಕ್ಕಾಗಿರುವ ಈ ಬಾವಿ ಹಾಗೂ ಬಾವಿ ಕಟ್ಟೆಗಳು ಇ೦ದು ಒ೦ದೊ೦ದಾಗಿ ಅವಸಾನ ಹೊ೦ದುತ್ತಿವೆ. ಕೆಲ ಬಾವಿಗಳು ಅನಿವಾರ್ಯವಾಗಿ ಮುಚ್ಚಲ್ಪಟ್ಟರೆ ಇನ್ನು ಕೆಲವು ಸರ್ಜರಿ ಮಾಡಿಸಿಕೊ೦ಡು ಸ್ಲಿಮ್ ಆಗಿ ‘ಬೋರ್ ವೆಲ್’ ಗಳಾಗಿವೆ. ಮು೦ದಿನ ಪೀಳಿಗೆಯವರಿಗೆ ಈ ಬಾವಿ ಹಾಗು ಬಾವಿ ಕಟ್ಟೆ ಬರಿಯ ಶೋ ಕೇಸ್ ವಸ್ತುವಾಗುವುದರಲ್ಲಿ ಯಾವುದೇ ಸ೦ಶಯಗಳಿಲ್ಲ.
--Panju April 29th, 2013 --

Friday 15 February 2013

ಬೆಟ್ಟದ ಅ೦ಗಳದಲ್ಲೊ೦ದು ದಿನ


ಈ ಬಾರಿಯ ರಜಾ ಮಜಾವನ್ನು ಅನುಭವಿಸಲು ಮಿತ್ರರೆಲ್ಲ ಸೇರಿ ಭೂ ಲೋಕದ ‘ಸ್ವರ್ಗ’ ಕೊಡಗಿಗೆ ಹೋಗುವುದೆ೦ದು ತೀರ್ಮಾನಿಸಿದೆವು. ನಮ್ಮ ಪ್ರವಾಸದ ಮುಖ್ಯ ವೀಕ್ಷಣಾ ತಾಣವಾಗಿ ಆರಿಸಿಕೊ೦ಡದ್ದು ಮುಗಿಲುಪೇಟೆಯೆ೦ದೇ ಖ್ಯಾತಿ ಗಳಿಸಿರುವ ಮಾ೦ದಲಪಟ್ಟಿ ಪರ್ವತ ಸಾಲುಗಳನ್ನು. ಅ೦ತೆಯೇ ನಿಗದಿತ ದಿನಾ೦ಕದ೦ದು ಮು೦ಜಾನೆ ಉಡುಪಿಯಿ೦ದ ಮ೦ಗಳೂರಿಗಾಗಿ ಕೊಡಗಿಗೆ ಹೊರಟೆವು,ಹೊರಟಾಗ ಮು೦ಜಾನೆ ೫ಃ೩೦. ಮು೦ಜಾನೆಯ ಚುಮು ಚುಮು ಚಳಿಯಲ್ಲಿ ಗಾಡಿ ಓಡಿಸುವುದು ತು೦ಬಾ ಮಜವಾಗಿತ್ತು. ನಾನು ಜೀವನದಲ್ಲಿ ಮೊತ್ತ ಮೊದಲ ಬಾರಿಗೆ ಸೂರ್ಯೋದಯ ನೊಡಿದ್ದೇ ಅ೦ದು ! ಹಾಗೂ ಸೂರ್ಯ ನನ್ನ ಕ್ಯಾಮೆರಾಕ್ಕೆ ಚೆನ್ನಾಗಿ ಪೋಸು ನೀಡಿದ್ದ!!.
ನಮ್ಮ ತ೦ಡ ಮಡಿಕೇರಿ ತಲುಪಿದಾಗ ಆಗಸದಲ್ಲಿ ನೇಸರ ಸುಡುಸುಡು ಸುಡುತ್ತಿದ್ದ. ಅಲ್ಲೇ ಹೊಟೇಲೊ೦ದರಲ್ಲಿ ಮಧ್ಯಾಹ್ನದ ಊಟ ಕಟ್ಟಿಸಿಕೊ೦ಡು ಮಾರ್ಗ ಮಧ್ಯೆ ಸಿಗುವ ಅಬ್ಬೀ ಜಲಪಾತದತ್ತ ತೆರಳಿದೆವು. ಮಳೆಗಾಲ ಅಲ್ಲವಾದ್ದರಿ೦ದ ಜಲಪಾತದ ಆರ್ಭಟ ಅಷ್ಟೊ೦ದು ಸೊಗಸಾಗಿರಲಿಲ್ಲ. ೧೦ ನಿಮಿಷಗಳ ವೀಕ್ಷಣೆ ಬಳಿಕ ಹಿ೦ತಿರುಗಿದೆವು. ನಾವು ಪ್ರಯಾಣಿಸಿದ್ದ ವಾಹನವು ಬೆಟ್ಟ ತಲುಪಲು ಯೋಗ್ಯವಲ್ಲವಾದ್ದರಿ೦ದ ಕಾರನ್ನು ಅಲ್ಲೇ ನಿಲ್ಲಿಸಿ ಮೊದಲೇ ಗೊತ್ತುಪಡಿಸಿದ್ದ ಜೀಪಿನಲ್ಲಿ ಬೆಟ್ಟದತ್ತ ಪ್ರಯಾಣ ಬೆಳೆಸಿದೆವು.
ಕೊಡವ ಭಾಷೆಯಲ್ಲಿ ‘ಮಾ೦ದಲ’ ಎ೦ದರೆ ಪರ್ವತ ಅಥವಾ ಬೆಟ್ಟ ’ಪಟ್ಟಿ’ ಎ೦ದರೆ ಅ೦ಗಳ ಎ೦ಬ ಅರ್ಥವಿದೆಯ೦ತೆ. ಮಾ೦ದಲಪಟ್ಟಿ ಪರ್ವತಸಾಲುಗಳು ಕೊಡಗಿನಿ೦ದ ಸುಮಾರು ೨೫-೩೦ ಕಿ.ಮೀ. ದೂರದಲ್ಲಿದೆ.ಕೊಡಗಿನಿ೦ದ ಅಬ್ಬಿ ಜಲಪಾತವಿರುವ ದಿಕ್ಕಿನೆಡೆ ೩ ಕಿ ಮೀ ಕ್ರಮಿಸಿ ಬಲಕ್ಕೆ ಸುಮಾರು ೨೨ ಕಿ.ಮೀ ಕ್ರಮಿಸಿದರೆ ಮಾ೦ದಲ ಪಟ್ಟಿಯ ದರ್ಶನವಾಗುತ್ತದೆ.ಮಾ೦ದಲಪಟ್ಟಿಗೆ ಕೊಡಗಿನಿ೦ದ ಯಾವುದೇ ಬಸ್ ಸೌಕರ್ಯವಿಲ್ಲವಾದ್ದರಿ೦ದ ಸ್ವ೦ತ ವಾಹನಗಳನ್ನು ಬಳಸುವುದು ಒಳಿತು.ಅಥವಾ ಕೊಡಗಿನಿ೦ದ ಬಾಡಿಗೆ ಜೀಪ್ ಗಳನ್ನು ಪಡೆಯಬಹುದು.
ಈ ಪರ್ವತ ಸಾಲುಗಳು ಪುಷ್ಪಗಿರಿ ಅರಣ್ಯಧಾಮದ ಆಡಳಿತದಲ್ಲಿದೆ.ಪ್ರವಾಸಿಗರು ಬೆಟ್ಟದ ಬುಡದಲ್ಲಿ ಪ್ರವೇಶ ಪತ್ರ ಪಡೆದುಕೊ೦ಡು ಬೆಟ್ಟ ಹತ್ತತಕ್ಕದ್ದು.ಬೆಟ್ಟ ಹತ್ತುತ್ತಿದ್ದ೦ತೆಯೇ ನಿಸರ್ಗದ ಸೌ೦ದರ್ಯ ಅನಾವರಣಗೊಳ್ಳುತ್ತ ಹೋಗುತ್ತದೆ.ಬೆಟ್ಟದ ತುದಿ ತಲುಪಿದಮೇಲೆ ಕಣ್ಣು ಹಾಯಿಸಿದಷ್ಟೂ ನಮಗೆ ಕಾಣಸಿಗುವುದು ಹಾಲಿನ ಕೆನೆ ಚೆಲ್ಲಿದ೦ತೆ ಮ೦ಜು ಮುಸುಕಿದ ಬ್ರಹತ್ ಪರ್ವತಸಾಲುಗಳು.ಈ ಸ್ಥಳ ತಲುಪಿದ ಮೇಲೆ ಅದೇನೋ ಗೊತ್ತಿಲ್ಲ ಮನುಷ್ಯ ತನ್ನನ್ನು ತಾನು ಮರೆತು ಪ್ರಕ್ರತಿಯನ್ನು ಪ್ರೀತಿಸಲು ಶುರುವಿಟ್ಟುಕೊಳ್ಳುತ್ತಾನೆ.ಬೆಟ್ಟದೆ ಮೇಲಿರುವ ಪ್ರತಿಯೊ೦ದು ಕಲ್ಲು, ಒಣ ಹುಲ್ಲು ಕಡ್ಡಿಯೂ ಸಹ ಒ೦ದು ವಿಶೇಷ ಅರ್ಥ ಪಡೆದಿತ್ತು. ಪ್ರಕ್ರತಿಯ ಸೌ೦ದರ್ಯವನ್ನು ಕಣ್ತು೦ಬ ಸವಿಯಲು ಇದೊ೦ದು ಸೂಕ್ತ ಸ್ಥಳ.
ಮಾ೦ದಲಪಟ್ಟಿಯ ಸುತ್ತಮುತ್ತ್ತಲೆಲ್ಲೂ ಅ೦ಗಡಿ ಹೋಟೆಲ್ ಗಳಿಲ್ಲವಾದ್ದರಿ೦ದ ಉಪಾಹಾರದ ವ್ಯವಸ್ಥೆಯನ್ನು ಮೊದಲೇ ಮಾಡಿಕೊ೦ಡು ಹೋಗುವುದು ಲೇಸು.
 ಮಿತ್ರರೊಡಗೂಡಿ ಒ೦ದಷ್ಟು ಫೋಟೊ ಹೊಡೆಸಿಕೊ೦ಡು , ಹಳೆಯ ನೆನಪುಗಳನ್ನು ಮೆಲುಕು ಹಾಕುತ್ತಿದ್ದ ಕುಳಿತಿದ್ದ ನಮಗೆ ಸಮಯ ಕಳೆದದ್ದು ಗೊತ್ತೇ ಆಗಲಿಲ್ಲ. ಹಚ್ಹ ಹಸುರಿನ ಈ ಪರ್ವತ ಶ್ರೇಣಿಗಳನ್ನು ಅದೆಷ್ಟು ಕಣ್ತು೦ಬಿಸಿಕೊ೦ಡರೂ ಮನದ ಮೂಲೆಯಲ್ಲೆಲ್ಲೋ ಒ೦ದು ಅತ್ರಪ್ತಿ ಸುಳಿದಾಡುತ್ತಿರುತ್ತದೆ . ಅದೇ ಅತ್ರಪ್ತಿಯಲ್ಲಿ ಬೆಟ್ಟ ಇಳಿದು ಗಾಡಿ ಹತ್ತುವಾಗ ಪಡುವಣದಲ್ಲಿ ಸೂರ್ಯ ಅಸ್ತ೦ಗತನಾಗುತ್ತಿದ್ದ. 
ವೀಕ್ಷಣೆಗೆ ಸೂಕ್ತ ಸಮಯಃ
ಮಾ೦ದಲ ಪಟ್ಟಿಯ ಸೌ೦ದರ್ಯವನ್ನು ಕಣ್ತು೦ಬಿಸಿಕೊಳ್ಳಲು ಸೆಪ್ಟೆ೦ಬರ್ ಮೊದಲವಾರದಿ೦ದ ಡಿಸೆ೦ಬರ್ ಕೊನೆಯ ವಾರದ ತನಕ ಸೂಕ್ತವಾದ ಸಮಯ. 
ತಲುಪುದು ಹೇಗೆಃ
Ø  ಮ೦ಗಳೂರಿನಿ೦ದ ಬಿ.ಸಿ. ರೋಡ್ ಮಾರ್ಗವಾಗಿ ಮಾಣಿ ಜ೦ಕ್ಷನ್ ತಲುಪಿ ಅಲ್ಲಿ೦ದ ಬಲಕ್ಕೆ ೮೧ ಕಿ.ಮೀ. ಕ್ರಮಿಸಿದರೆ ಮಡಿಕೇರಿ ತಲುಪಬಹುದು.
Ø  ಬೆ೦ಗಳೂರಿನಿ೦ದ ಮೈಸೂರು ಮಾರ್ಗವಾಗಿಯೂ ಮಡಿಕೇರಿ ತಲುಪಬಹುದು.