Monday 30 April 2012

'ಆಕ್ಸಿಡೆಂಟ್ '


ಎಂದಿನಂತೆ ಇಂದೂ ಬೆಳಗ್ಗೆ ಏಳುವುದು ಸ್ವಲ್ಪ ತಡವಾಗಿತ್ತು, ಅವಸರ ಅವಸರದಿಂದಲೇ ಬೆಳಗ್ಗಿನ ಕೆಲಸ ಕಾರ್ಯಗಳನ್ನು ಮುಗಿಸಿ ರೂಮಿನಿಂದ ಹೊರಬಿದ್ದೆನು. ಅದಾಗಲೇ ಗೇಟಿನ ಬಳಿ ನಮ್ಮ ಓನರ್ ನ ನಾಯಿ ನನ್ನ ದಾರಿಗೆ ಅಡ್ಡ ನಿಂತು ಏನನ್ನೋ ಹೇಳಲು ಬಯಸುತ್ತಿತ್ತು. ಅದರ ಮಾತಿಗೆ ಕಿವಿಗೊಡದೆ ಸೀದಾ ಗೇಟ್ಎಳೆದು ಕೊಂಡು ಕುಮಾರಣ್ಣನ ಹೋಟೆಲ್ ನತ್ತ ನಡೆದೆನು. ಹೊರಗಡೆ ವಾತಾವರಣ ತಿಳಿಯಾಗಿತ್ತು ಮತ್ತು ಎಲ್ಲೊ ಮಳೆಯಾಗಿರುವ ಸೂಚನೆಯೋ ಎಂಬಂತೆ ತಣ್ಣನೆಯೆ ಗಾಳಿ ಬೀಸುತ್ತಿತ್ತು.........
ಕುಮಾರಣ್ಣನ ಇಡ್ಲಿ ತೊವ್ವೆ ,ಚಾ ಕುಡಿದು ಬಸ್ಸ್ಟ್ಯಾಂಡ್ ನತ್ತ ನಡೆದೆ. ಬಸ್ಸ್ಟ್ಯಾಂಡ್ ನಲ್ಲಿ ಯಾವತ್ತಿನ ತರಹ 'ಹೌಸ್ ಫುಲ್' ಪ್ರದರ್ಶನವಿರಲಿಲ್ಲ ಮತ್ತು ತಂಬಾಕಿನ ಕಮಟು ವಾಸನೆಯೂ ಇರಲಿಲ್ಲ!!.ಬಹಳ ಸಮಯದ ನಂತರ ಇಂದು ಬಸ್ಸ್ಟ್ಯಾಂಡ್ ನಲ್ಲಿ 'ಫ್ರೆಶ್ ಏರ್' ಸಿಕ್ಕಿತ್ತು ನಂಗೆ. ಹಾಗಾಗಿ ನನಗೂ 'ಧಂ' ಹೊಡೆಯುವ ಮನಸ್ಸಾಗಲಿಲ್ಲ.ಹೀಗೆ ಸ್ವಲ್ಪ ಹೊತ್ತು ಕುಳಿತು ಏನನ್ನೋ ಯೋಚಿಸುತ್ತಿದ್ದಾಗ ನಮ್ಮ ಕೆ ಎಸ್ ಆರ್ ಟಿ ಸಿ ಲೋಕಲ್ ಗಾಡಿ ಬಂದೆ ಬಿಟ್ಟಿತು. ಬಸ್ಸನ್ನು ಹತ್ತಿದವನೇ ಕಂಡ ಕ್ತ್ರ್ಗಗೆ ತಿಂಗಳ ಪಾಸನ್ನು ತೋರಿಸುತ್ತ ಕಿಟಕಿ ಬಳಿಯ ಸೀಟಲ್ಲಿ ಕುಳಿತೆ.ಬಸ್ಸು ಮುಂದಕ್ಕೆ ಚಲಿಸುತ್ತಿರುವಾಗ ತಣ್ಣನೆಯ ಗಾಳಿ ಮುಖವೆಲ್ಲ ಹರಡಿತು,ಹಾಗೆ ಗಾಳಿಗೆ ಮುಖ ವೊಡ್ದುತ್ತಿರಲು ಪಕ್ಕದಲ್ಲಿ ಯಾರೋ ಹಾರ್ನ್ ಮಾಡಿದ್ದು ಕೇಳಿಸಿತು. ಇಣುಕಿದರೆ ಗೆಳೆಯ ಗಿರೀಶ ತನ್ನ ಪಲ್ಸರ್ ನಲ್ಲಿ ಬರಲು ಕರೆಯುತ್ತಿದ್ದ. ಮುಂದಿನ ನಿಲ್ದಾಣದಲ್ಲಿ ಸಿಗುವೆ ಎಂದು ಕೈ ಸನ್ನೆಯ ಮೂಲಕ ತಿಳಿಸಿದೆ. ಮುಂದಿನ ಸ್ಟಾಪ್ ನಲ್ಲಿ ಬಸ್ಸಿಂದಿಳಿದು ಬೈಕ್ ಹತ್ತಿದೆ. ಈತನೋ ಬೈಕ್ ಓಡಿಸುವುದರಲ್ಲ್ಲಿ ಎರಡು ಬಾರಿ ಜಿಲ್ಲಾ ಚಾಂಪಿಯನ್ . ಎಂತಹ ಸಂದುಗೊಂದು ಗಳಲ್ಲಿಯೂ ಸಹ ಬಹಳ ಸಲೀಸಾಗಿ ಗಾಡಿ ಓಡಿಸಬಲ್ಲ ಚತುರ.ಆದರೆ ಸಹ ಸವಾರರ ಗತಿ ದೇವ್ರೇ ಗತಿ !!. ಬಸ್ಸು , ಕಾರು , ಲಾರಿ ..... ಹೀಗೆ ಹಲವಾರು ವಾಹನಗಳನ್ನ ಹಿಂದಿಕ್ಕಿ ಶರವೇಗದಿಂದ ಸಾಗುತಿತ್ತು ನಮ್ಮ ಪಲ್ಸರ್. ಬೈಕು ಕಂಕನಾಡಿ ರಸ್ತೆ ದಾಟಿ ಪಂಪ್ ವೆಲ್ ನತ್ತ ಸಾಗುತಿತ್ತು.....
ಹಾ !!, ಇನ್ನು ಕಾಲೇಜಿಗೆ ಕೇವಲ ಐದೇ ಕಿಲೋಮೀಟರು . ಹೀಗೆ ಸಾಗುತ್ತಿರಲು ಎದುರುಗಡೆಯಿಂದ ಒಂದು ಲಾರಿ ನಿಧಾನವಾಗಿ ಸಾಗುತಿತ್ತು. ಅದೇ ನಮ್ಮೊರಿನ ಮರಳು ಸಾಗಾಟದ ಲಾರಿ !!. ಮನಸ್ಸಲ್ಲೇ ಏನನ್ನೋ ಗೊಣಗಿದ ಗಿರೀಶ ಲಾರಿಯನ್ನ ಹಿಂದಿಕ್ಕಲು ಗೇರ್ ಶಿಫ್ಟ್ ಮಾಡಿ ಜೋರಾಗಿ ಅಕ್ಸಿಲೆಟರ್ ಕೊಟ್ಟ. ಆದರೆ ವಿಧಿ ಏನನ್ನೋ ಬಯಸಿತ್ತು.ಲಾರಿಯವರು ಮರಳಿಗೆ ಸರಿಯಾದ ಮುಚ್ಚಿಗೆ ಹಾಕಿರಲಿಲ್ಲ,ಪರಿಣಾಮ ಮರಳು ಕಣಗಳು ನಮ್ಮಿಬ್ಬರ ಕಣ್ಣು ಹೊಕ್ಕಿದವು.ಗಿರೀಶನಿಗೆ ಆಗಲೇ ನಿಯಂತ್ರಣ ತಪ್ಪಿ , ಬೈಕ್ ನ ಹ್ಯಾಂಡಲ್ ಲಾರಿಯ ಮೂತಿಗೆ ಒರೆಸಿತು!.........
ನಾನಿನ್ನೂ ಗಾಳಿಯಲ್ಲಿ ತೇಲುತ್ತಿದ್ದೆ. ತೇಲುತ್ತ ಬಂದವನೇ ಡಿಕ್ಕಿ ಹೊಡೆದದ್ದು ರಸ್ತೆ ವಿಭಾಜಕಕ್ಕೆ!!! ಕಷ್ಟ ಪಟ್ಟು ಕಣ್ಣನ್ನು ತೆರೆಯಲು ಪ್ರಯತ್ನಿಸಿದೆ . ಯೆನಾಸ್ಚರ್ಯ!! ನನಗೆ ಎಲ್ಲವೂ ಸ್ಪಷ್ಟವಾಗಿ ಕಾಣುತ್ತಿದೆ, ಕಾರಣ ನಾನಿನ್ನೂ ಬಸ್ಸಲ್ಲೇ ಕುಳಿತಿದ್ದೇನೆ !!.ಕಂಡಿದ್ದು ಕನಸು ಎಂದು ಸ್ವಲ್ಪ ಸಮಾಧಾನವಾಯಿತು. ಆದರೆ ಬಸ್ಸಲ್ಲಿ ಯಾರೂ ಇರಲಿಲ್ಲ ಎಲ್ಲರೂ ಕೆಳಗೆ ಇಳಿದಿದ್ದರು. ಕಿಟಕಿಯಿಂದ ಹಿಂದೆ ಇಣುಕಿದರೆ ವಾಹನಗಳು ಸಾಲುಗಟ್ಟಿ ನಿಂತಿವೆ. ಏನಾಗಿದೆ ನೋಡೋಣ ಎಂದು ಕೆಳಗೆ ಇಳಿದರೆ..... ಇಬ್ಬರು ವಿಧ್ಯಾರ್ಥಿಗಳು ರಸ್ತೆಯ ನಡುವೆ ರಕ್ತದ ಮಡುವಿನಲ್ಲಿ ಬಿದ್ದಿದ್ದಾರೆ, ಬದಿಯಲ್ಲಿ ಅದೇ ಮರಳು ಸಾಗಾಟದ ವಾಹನ ಮೂತಿ ಜಜ್ಜಿಸಿಕೊಂಡು ನಿಂತಿದೆ !! . ಸುತ್ತಲೂ ಸೇರಿದ ಜನ ಪೋಲಿಸು , ಅಂಬುಲೆನ್ಸ್ ಗೆ ಕಾಯುತ್ತಿದ್ದಾರೆ. ಯಾರೊಬ್ಬರು ಅವರನ್ನ ಆಸ್ಪತ್ರೆಗೆ ಸಾಗಿಸುವ ಗೋಜಿಗೆ ಹೋಗಲಿಲ್ಲ. ಇದನ್ನೆಲ್ಲಾ ನೋಡಿದ ನಾನು ಬೆವೆತು ನೀರಾದೆ. ನಾನು ಇಷ್ಟ್ಹೊತ್ತು ಕಂಡದ್ದು ' ಸಿಕ್ಸ್ತ್ ಸೇನ್ಸೋ ' ಅಥವಾ ಕೇವಲ ಕಾಕತಾಳೀಯವೋ ಎಂದು ತಬ್ಬಿಬ್ಬುಗೊಂಡೆ. ಇಂದು ಕಾಲೇಜ್ ಬೇಡವೆಂದು ತೀರ್ಮಾನಿಸಿ ತಿರುಗಿ ರೂಂನತ್ತ ನಡೆದೆ.

ದ್ವಿಚಕ್ರ ಸವಾರರಿಗೊಂದು ಮಾತು: 'ಪ್ರಯಾಣದ ದೂರ ಎಷ್ಟೇ ಇರಲಿ , ಹೆಲ್ಮೆಟ್ ನಿಮ್ಮ ಜೊತೆಗಿರಲಿ !! .'

Saturday 28 April 2012

ನಾರಾಯಣ ಆಚಾರ್ರ ಮೊಬೈಲ್ ಬಿಸಿನೆಸ್ಸ್ !'


ಹಿಂದಿನ ರಾತ್ರಿ ಕರೆಂಟ್ ಹೋಗಿದ್ದರಿಂದಲೋ ಏನೋ ಇಂದು ಬೆಳಗ್ಗೆ ತುಸು ಬೇಗನೆ ಎಚ್ಚರವಾಯಿತು. ಚಹಾ ಮಾಡೋಣವೆಂದು ಸ್ಟವ್ ಹಚ್ಚಲು ಕಡ್ಡಿ ಗೀರಿದಾಗಲೇ ನೆನಪಾದದ್ದು ಹಿಂದಿನ ದಿನವೇ ಗ್ಯಾಸ್ ಖಾಲಿಯಾಗಿದೆ ಎಂದು. ಹಾಗಾಗಿ ಇಂದು ತಿಂಡಿ ನಮ್ಮ ನಾರಾಯಣ ಆಚಾರ್ರ ಮೊಬೈಲ್ ಕ್ಯಾಂಟೀನ್ನಲ್ಲಿ ತಿನ್ನೋಣ ಎಂದು ತೀರ್ಮಾನಿಸಿದೆ. 


ನಾರಾಯಣ ಆಚಾರ್ರ ಮೊಬೈಲ್ ಕ್ಯಾಂಟೀನ್ ಮಂಗಳೂರಿನ ಜನಪ್ರಿಯ 'ಪುಟಾಣಿ' ಹೋಟೆಲ್ ಗಳಲ್ಲೊಂದು. ಪ್ರತಿ ದಿನ ಬೆಳಗ್ಗೆ ಆರು ಗಂಟೆಗೆ ಇವರ ರಿಕ್ಷಾ ಹೋಟೆಲ್   'ಸ್ಟೇಟ್ ಬ್ಯಾಂಕ್' ಬಳಿಯ ಒಂದು ಮೂಲೆಯಲ್ಲಿ ಬಂದು ನಿಲ್ಲುತ್ತಿತ್ತು. ಸ್ಟೇಟ್ ಬ್ಯಾಂಕ್ ಎಂದರೆ ನಮ್ಮೂರಿನ ಬಸ್ಟ್ಯಾಂಡ್ ಹೆಸರು . ಬಸ್ಟ್ಯಾಂಡ್ ಪಕ್ಕದಲ್ಲೇ ಸ್ಟೇಟ್ ಬ್ಯಾಂಕ್ ಪ್ರಧಾನ ಕಚೇರಿ ಇರುವುದರಿಂದ ಈ ಹೆಸರು ಬಂದಿತೋ ಏನೋ !!.ಈ ಬಸ್ಟ್ಯಾಂಡ್ ಎಷ್ಟು ಪ್ರಸಿದ್ದವೆಂದರೆ ಕೆಲವರಂತೂ ಬಸ್ಟ್ಯಾಂಡ್ ಎಲ್ಲಿ ಎಂದು ಕೇಳಿದರೆ 'ಗೊತ್ತಿಲ್ಲ' ಎನ್ನುತ್ತಾರೆ , ಬದಲಾಗಿ 'ಸ್ಟೇಟ್ ಬ್ಯಾಂಕ್ ' ಗೆ ದಾರಿ ಯಾವುದು ಎಂದು ಕೇಳಿದರೆ ನಗು ನಗುತ್ತ ಉತ್ತರಿಸುತ್ತಾರೆ. ಇವರ ಈ ಹೋಟೆಲ್ ಅನೇಕರಿಗೆ ಬೆಳಗಿನ ಉಪಾಹಾರ ನೀಡುತ್ತಿತ್ತು . ಡ್ರೈವರ್ , ಕಂಡಕ್ಟರ್ , ವಿಧ್ಯಾರ್ಥಿಗಳು . . . .  ಹೀಗೆ ಅನೇಕರು ಬಂದು ಇಲ್ಲಿ ಬೆಳಗ್ಗಿನ ಉಪಾಹಾರ ಪೂರೈಸುತ್ತಿದ್ದರು. ಇವರ ಹೋಟೆಲ್ ನ ವಿಶೇಷವೆಂದರೆ ಬೆಳಗ್ಗೆ ಆರರಿಂದ ಎಂಟರವರೆಗೆ ಮಾತ್ರ ಇವರ ಹೋಟೆಲ್ ತೆರೆದಿರುತ್ತದೆ ಹಾಗಾಗಿ ಜನ ಸಾಲುಗಟ್ಟಿ ನಿಂತಿರುತ್ತಾರೆ ಇವರು ಮಾಡುವ ಇಡ್ಲಿ , ವಡೆ , ಬನ್ಸ್, ಉಪ್ಪಿಟ್ಟು , ಅವಲಕ್ಕಿ ........ ಇತ್ಯಾದಿಗಳನ್ನ ಸವಿಯಲು .

ಆಚಾರ್ರು ದಿನಾಲು ಐದರಿಂದ ಆರು ತಿಂಡಿಗಳನ್ನು ಮಾಡುತ್ತಿದ್ದರು.ಯಾವುದನ್ನೂ ಕ್ಯಾಂಟೀನ್ನಲ್ಲಿ ಮಾಡುತ್ತಿರಲಿಲ್ಲ ಬದಲಾಗಿ ಮನೆಯಲ್ಲಿ ತಯಾರಿಸಿ ತಂದು ಬೇರೆಯವರಿಗೆ ತಿನ್ನಿಸುತ್ತಿದ್ದರು. ನನಗೆ ಆಚಾರ್ರು ಪರಿಚಯವಾದದ್ದು ಎರಡು ವರ್ಷಗಳ ಹಿಂದೆ. ನಾನು ಮಂಗಳೂರಿಗೆ ಬಂದ ಪ್ರಾರಂಭದ ದಿನಗಳಿಂದಲೂ ಅಲ್ಲೇ ಬೆಳಗಿನ ಉಪಾಹಾರ ಸೇವಿಸುತ್ತಿದ್ದೆ.ಅವರು ಮಾಡುತ್ತಿದ್ದ ಇಡ್ಲಿ ಸಾಂಬಾರ್ ಬಹುಶಃ ಮಂಗಳೂರಲಿನಲ್ಲೆಲ್ಲೂ ಸಿಗುತ್ತಿರಲಿಲ್ಲ. ದಿನಗಳೆದಂತೆ ಬಹಳ ಆತ್ಮೀಯರಾದ ಆಚಾರ್ರು ನನಗೂ 'ಒಗ್ಗರಣೆ' ಹಾಕುವುದನ್ನ ಕಲಿಸಿದ್ದರು. ಇವರು ಹೇಳಿಕೊಟ್ಟ ಕೆಲವೊಂದು ತಿಂಡಿಗಳನ್ನು ನಾನು ರೂಮಲ್ಲಿ ನನ್ನ ಮೇಲೆಯೇ ಪ್ರಯೋಗಿಸಿಕೊಂಡದ್ದೂ ಇದೆ !

ಆಚಾರ್ರ ಈ ಹೋಟೆಲ್ನ ಹಿಂದೆ ಒಂದು ಕಥೆಯಿದೆ. ನಾರಾಯಣ ಆಚಾರ್ರ ಮಗ ನವೀನ ದೂರದ ಮುಂಬೈನಲ್ಲಿ ಉದ್ಯೋಗದಲ್ಲಿದ್ದಾನೆ. ಊರಿನಲ್ಲಿ ವೃದ್ಧ ತಂದೆ , ತಾಯಿ ಮಾತ್ರ ಇರುವುದು. ಮುಂಬೈಗೆ ಹೋದ ಬಳಿಕ ನವೀನ ,ತಂದೆಗೆ ಒಂದು ಮೊಬೈಲ್ ತೆಗೆಸಿ ಕೊಡುತ್ತಾನೆ. ಇದೇ ಮೊಬೈಲ್ನಿಂದ ಆಚಾರ್ರಿಗೆ ಒಂದು ವಿನೂತನ 'ಐಡಿಯಾ' ಬಂದದ್ದು ಅದೇನೆಂದರೆ ಮೊಬೈಲ್ ಚಹಾ ಅಂಗಡಿ !!. ಇವರು ಇದ್ದ ಮನೆಯ ಸಮೀಪವೇ ಒಂದು ವಾಣಿಜ್ಯ ಕಟ್ಟಡವಿತ್ತು. ಇಲ್ಲಿ ಹಲವಾರು ಕಛೇರಿಗಳು ಕಾರ್ಯನಿರ್ವಹಿಸುತ್ತಿದ್ದವು ಇವರಿಗೆಲ್ಲ ಚಹಾ ಬೆಕಾದರೆ ಅನತಿ  ದೂರದಲ್ಲಿದ್ದ ಹೋಟೆಲ್ನಿಂದ ತರಿಸಿಕೊಳ್ಳಬೇಕಾಗಿತ್ತು. ಚಹಾ ತಲುಪುವಾಗ ಒಂದೋ ತಣ್ಣಗಾಗಿರುತ್ತಿತ್ತು ಇಲ್ಲವೇ ಇನ್ನೇನೋ ಆಗಿರುತಿತ್ತು. ಇದನ್ನು ಕಂಡ ಆಚಾರ್ರು ಒಂದು ವಿನೂತನ ಯೋಜನೆ ಪ್ರಾರಂಭಿಸಿದರು . ಅದೇನೆಂದರೆ ಯಾರ್ಯಾರಿಗೆ ಚಹಾ ಬೇಕೋ ಅವರು ಆಚಾರ್ರ ಮೊಬೈಲ್ಗೆ ಮಿಸ್ ಕಾಲ್ ಕೊಟ್ಟರೆ ಸಾಕು , ಇವರು ಚಹಾದೊಂದಿಗೆ ಹಾಜರು !!.ಬೆಳಗ್ಗೆ ಹತ್ತರಿಂದ ಹನ್ನೊಂದುವರೆ ಯವರೆಗೆ ಇವರು ಮಿಸ್ ಕಾಲ್ ಗೆ ಸ್ಪಂದಿಸುತ್ತಿದ್ದರು. ಇವರ ಕಾರ್ಯವ್ಯಾಪ್ತಿ ಆ ಕಟ್ಟಡ ಕ್ಕೆ ಮಾತ್ರ ಸೀಮಿತಗೊಂಡಿತ್ತು. ನಂತರ ಯಾರೋ ಈ ಕ್ಯಾಂಟೀನ್ ನ ಬಗ್ಗೆ ಹೇಳಿದರು, ಹಾಗೆ ಸ್ವ ಸಹಾಯ ಸಂಘದವರ ನೆರವಿನಿಂದ ಈ ಮೊಬೈಲ್ ಕ್ಯಾಂಟೀನ್ ಪ್ರಾರಂಭಿಸಿದರು. ಹಲವಾರು ಜನರ ದಿನ ಪ್ರಾರಂಭವಾಗುತ್ತಿದ್ದುದು ಇವರ ಕ್ಯಾಂಟೀನ್ ನಿಂದಲೇ . ಇವರು ಮಾಡುವ ಇಡ್ಲಿ ಸಾಂಬಾರ್ . ಬನ್ಸ್ , ಬಹಳ ಸೊಗಸಾಗಿರುತ್ತದೆ ಮತ್ತು ಇವರು ಸ್ವಚ್ಚತೆಗೆ ಬಹಳ ಪ್ರಾಮುಖ್ಯತೆಯನ್ನು ಕೊಡುತ್ತಿದ್ದರು ಹಾಗಾಗಿ ಜನ ಇವರ ಕ್ಯಾಂಟೀನನ್ನು ಬಹಳವಾಗಿ ಮೆಚ್ಚುತ್ತಿದ್ದರು. ಇವರ ಕ್ಯಾಂಟೀನ್ ಇಷ್ಟೊಂದು ಜನಪ್ರಿಯ ಪಡೆದಿದ್ದರೂ ಇವರ 'ಮೊಬೈಲ್' ಚಹಾ ಅಂಗಡಿ ಮಾತ್ರ ಇನ್ನೂ ಕಾರ್ಯಾಚರಿಸುತ್ತಿದೆ.

ನಾವು ಇಂದಿನ  ದಿನಗಳಲ್ಲಿ ಮೊಬೈಲ್ ಫೋನನ್ನು ಅಗತ್ಯಕ್ಕಿಂತ ತುಸು ಹೆಚ್ಚಾಗಿಯೇ ಬಳಸುತ್ತಿದ್ದೇವೆ . ಕೆಲವರಂತೂ ಕರೆಮಾಡುವುದನ್ನು ಬಿಟ್ಟು ಬೇರೆ ಎಲ್ಲಾ ಕೆಲಸಕ್ಕೂ ಮೊಬೈಲ್ ಬಳಸುತ್ತಾರೆ. ಉದಾ : ಫೇಸ್ಬುಕ್ ,ಆರ್ಕುಟ್ ,ಸಿನಿಮಾ ನೋಡಲು ಇತ್ಯಾದಿ ..... ನಮ್ಮ ಆಚಾರ್ರಂತೆ ಯೋಚನೆ ಮಾಡುವವರು ಬಹಳ ಕಮ್ಮಿ .
ಅದೇನೇ ಇರಲಿ ಇವತ್ತು ವಿಶೇಷವಾಗಿ ಶ್ಯಾವಿಗೆ ಕೂರ್ಮ ಮಾಡಿದ್ದಾರಂತೆ ಹಾಗೂ ನನಗೆ ಗ್ಯಾಸ್ ಸಿಲಿಂಡರ್ ಸಹ  ಬುಕ್ ಮಾಡಬೇಕಿದೆ . 

ನಾ ಹೋಗಿ ಬರಲಾ ??!