Monday 30 April 2012

'ಆಕ್ಸಿಡೆಂಟ್ '


ಎಂದಿನಂತೆ ಇಂದೂ ಬೆಳಗ್ಗೆ ಏಳುವುದು ಸ್ವಲ್ಪ ತಡವಾಗಿತ್ತು, ಅವಸರ ಅವಸರದಿಂದಲೇ ಬೆಳಗ್ಗಿನ ಕೆಲಸ ಕಾರ್ಯಗಳನ್ನು ಮುಗಿಸಿ ರೂಮಿನಿಂದ ಹೊರಬಿದ್ದೆನು. ಅದಾಗಲೇ ಗೇಟಿನ ಬಳಿ ನಮ್ಮ ಓನರ್ ನ ನಾಯಿ ನನ್ನ ದಾರಿಗೆ ಅಡ್ಡ ನಿಂತು ಏನನ್ನೋ ಹೇಳಲು ಬಯಸುತ್ತಿತ್ತು. ಅದರ ಮಾತಿಗೆ ಕಿವಿಗೊಡದೆ ಸೀದಾ ಗೇಟ್ಎಳೆದು ಕೊಂಡು ಕುಮಾರಣ್ಣನ ಹೋಟೆಲ್ ನತ್ತ ನಡೆದೆನು. ಹೊರಗಡೆ ವಾತಾವರಣ ತಿಳಿಯಾಗಿತ್ತು ಮತ್ತು ಎಲ್ಲೊ ಮಳೆಯಾಗಿರುವ ಸೂಚನೆಯೋ ಎಂಬಂತೆ ತಣ್ಣನೆಯೆ ಗಾಳಿ ಬೀಸುತ್ತಿತ್ತು.........
ಕುಮಾರಣ್ಣನ ಇಡ್ಲಿ ತೊವ್ವೆ ,ಚಾ ಕುಡಿದು ಬಸ್ಸ್ಟ್ಯಾಂಡ್ ನತ್ತ ನಡೆದೆ. ಬಸ್ಸ್ಟ್ಯಾಂಡ್ ನಲ್ಲಿ ಯಾವತ್ತಿನ ತರಹ 'ಹೌಸ್ ಫುಲ್' ಪ್ರದರ್ಶನವಿರಲಿಲ್ಲ ಮತ್ತು ತಂಬಾಕಿನ ಕಮಟು ವಾಸನೆಯೂ ಇರಲಿಲ್ಲ!!.ಬಹಳ ಸಮಯದ ನಂತರ ಇಂದು ಬಸ್ಸ್ಟ್ಯಾಂಡ್ ನಲ್ಲಿ 'ಫ್ರೆಶ್ ಏರ್' ಸಿಕ್ಕಿತ್ತು ನಂಗೆ. ಹಾಗಾಗಿ ನನಗೂ 'ಧಂ' ಹೊಡೆಯುವ ಮನಸ್ಸಾಗಲಿಲ್ಲ.ಹೀಗೆ ಸ್ವಲ್ಪ ಹೊತ್ತು ಕುಳಿತು ಏನನ್ನೋ ಯೋಚಿಸುತ್ತಿದ್ದಾಗ ನಮ್ಮ ಕೆ ಎಸ್ ಆರ್ ಟಿ ಸಿ ಲೋಕಲ್ ಗಾಡಿ ಬಂದೆ ಬಿಟ್ಟಿತು. ಬಸ್ಸನ್ನು ಹತ್ತಿದವನೇ ಕಂಡ ಕ್ತ್ರ್ಗಗೆ ತಿಂಗಳ ಪಾಸನ್ನು ತೋರಿಸುತ್ತ ಕಿಟಕಿ ಬಳಿಯ ಸೀಟಲ್ಲಿ ಕುಳಿತೆ.ಬಸ್ಸು ಮುಂದಕ್ಕೆ ಚಲಿಸುತ್ತಿರುವಾಗ ತಣ್ಣನೆಯ ಗಾಳಿ ಮುಖವೆಲ್ಲ ಹರಡಿತು,ಹಾಗೆ ಗಾಳಿಗೆ ಮುಖ ವೊಡ್ದುತ್ತಿರಲು ಪಕ್ಕದಲ್ಲಿ ಯಾರೋ ಹಾರ್ನ್ ಮಾಡಿದ್ದು ಕೇಳಿಸಿತು. ಇಣುಕಿದರೆ ಗೆಳೆಯ ಗಿರೀಶ ತನ್ನ ಪಲ್ಸರ್ ನಲ್ಲಿ ಬರಲು ಕರೆಯುತ್ತಿದ್ದ. ಮುಂದಿನ ನಿಲ್ದಾಣದಲ್ಲಿ ಸಿಗುವೆ ಎಂದು ಕೈ ಸನ್ನೆಯ ಮೂಲಕ ತಿಳಿಸಿದೆ. ಮುಂದಿನ ಸ್ಟಾಪ್ ನಲ್ಲಿ ಬಸ್ಸಿಂದಿಳಿದು ಬೈಕ್ ಹತ್ತಿದೆ. ಈತನೋ ಬೈಕ್ ಓಡಿಸುವುದರಲ್ಲ್ಲಿ ಎರಡು ಬಾರಿ ಜಿಲ್ಲಾ ಚಾಂಪಿಯನ್ . ಎಂತಹ ಸಂದುಗೊಂದು ಗಳಲ್ಲಿಯೂ ಸಹ ಬಹಳ ಸಲೀಸಾಗಿ ಗಾಡಿ ಓಡಿಸಬಲ್ಲ ಚತುರ.ಆದರೆ ಸಹ ಸವಾರರ ಗತಿ ದೇವ್ರೇ ಗತಿ !!. ಬಸ್ಸು , ಕಾರು , ಲಾರಿ ..... ಹೀಗೆ ಹಲವಾರು ವಾಹನಗಳನ್ನ ಹಿಂದಿಕ್ಕಿ ಶರವೇಗದಿಂದ ಸಾಗುತಿತ್ತು ನಮ್ಮ ಪಲ್ಸರ್. ಬೈಕು ಕಂಕನಾಡಿ ರಸ್ತೆ ದಾಟಿ ಪಂಪ್ ವೆಲ್ ನತ್ತ ಸಾಗುತಿತ್ತು.....
ಹಾ !!, ಇನ್ನು ಕಾಲೇಜಿಗೆ ಕೇವಲ ಐದೇ ಕಿಲೋಮೀಟರು . ಹೀಗೆ ಸಾಗುತ್ತಿರಲು ಎದುರುಗಡೆಯಿಂದ ಒಂದು ಲಾರಿ ನಿಧಾನವಾಗಿ ಸಾಗುತಿತ್ತು. ಅದೇ ನಮ್ಮೊರಿನ ಮರಳು ಸಾಗಾಟದ ಲಾರಿ !!. ಮನಸ್ಸಲ್ಲೇ ಏನನ್ನೋ ಗೊಣಗಿದ ಗಿರೀಶ ಲಾರಿಯನ್ನ ಹಿಂದಿಕ್ಕಲು ಗೇರ್ ಶಿಫ್ಟ್ ಮಾಡಿ ಜೋರಾಗಿ ಅಕ್ಸಿಲೆಟರ್ ಕೊಟ್ಟ. ಆದರೆ ವಿಧಿ ಏನನ್ನೋ ಬಯಸಿತ್ತು.ಲಾರಿಯವರು ಮರಳಿಗೆ ಸರಿಯಾದ ಮುಚ್ಚಿಗೆ ಹಾಕಿರಲಿಲ್ಲ,ಪರಿಣಾಮ ಮರಳು ಕಣಗಳು ನಮ್ಮಿಬ್ಬರ ಕಣ್ಣು ಹೊಕ್ಕಿದವು.ಗಿರೀಶನಿಗೆ ಆಗಲೇ ನಿಯಂತ್ರಣ ತಪ್ಪಿ , ಬೈಕ್ ನ ಹ್ಯಾಂಡಲ್ ಲಾರಿಯ ಮೂತಿಗೆ ಒರೆಸಿತು!.........
ನಾನಿನ್ನೂ ಗಾಳಿಯಲ್ಲಿ ತೇಲುತ್ತಿದ್ದೆ. ತೇಲುತ್ತ ಬಂದವನೇ ಡಿಕ್ಕಿ ಹೊಡೆದದ್ದು ರಸ್ತೆ ವಿಭಾಜಕಕ್ಕೆ!!! ಕಷ್ಟ ಪಟ್ಟು ಕಣ್ಣನ್ನು ತೆರೆಯಲು ಪ್ರಯತ್ನಿಸಿದೆ . ಯೆನಾಸ್ಚರ್ಯ!! ನನಗೆ ಎಲ್ಲವೂ ಸ್ಪಷ್ಟವಾಗಿ ಕಾಣುತ್ತಿದೆ, ಕಾರಣ ನಾನಿನ್ನೂ ಬಸ್ಸಲ್ಲೇ ಕುಳಿತಿದ್ದೇನೆ !!.ಕಂಡಿದ್ದು ಕನಸು ಎಂದು ಸ್ವಲ್ಪ ಸಮಾಧಾನವಾಯಿತು. ಆದರೆ ಬಸ್ಸಲ್ಲಿ ಯಾರೂ ಇರಲಿಲ್ಲ ಎಲ್ಲರೂ ಕೆಳಗೆ ಇಳಿದಿದ್ದರು. ಕಿಟಕಿಯಿಂದ ಹಿಂದೆ ಇಣುಕಿದರೆ ವಾಹನಗಳು ಸಾಲುಗಟ್ಟಿ ನಿಂತಿವೆ. ಏನಾಗಿದೆ ನೋಡೋಣ ಎಂದು ಕೆಳಗೆ ಇಳಿದರೆ..... ಇಬ್ಬರು ವಿಧ್ಯಾರ್ಥಿಗಳು ರಸ್ತೆಯ ನಡುವೆ ರಕ್ತದ ಮಡುವಿನಲ್ಲಿ ಬಿದ್ದಿದ್ದಾರೆ, ಬದಿಯಲ್ಲಿ ಅದೇ ಮರಳು ಸಾಗಾಟದ ವಾಹನ ಮೂತಿ ಜಜ್ಜಿಸಿಕೊಂಡು ನಿಂತಿದೆ !! . ಸುತ್ತಲೂ ಸೇರಿದ ಜನ ಪೋಲಿಸು , ಅಂಬುಲೆನ್ಸ್ ಗೆ ಕಾಯುತ್ತಿದ್ದಾರೆ. ಯಾರೊಬ್ಬರು ಅವರನ್ನ ಆಸ್ಪತ್ರೆಗೆ ಸಾಗಿಸುವ ಗೋಜಿಗೆ ಹೋಗಲಿಲ್ಲ. ಇದನ್ನೆಲ್ಲಾ ನೋಡಿದ ನಾನು ಬೆವೆತು ನೀರಾದೆ. ನಾನು ಇಷ್ಟ್ಹೊತ್ತು ಕಂಡದ್ದು ' ಸಿಕ್ಸ್ತ್ ಸೇನ್ಸೋ ' ಅಥವಾ ಕೇವಲ ಕಾಕತಾಳೀಯವೋ ಎಂದು ತಬ್ಬಿಬ್ಬುಗೊಂಡೆ. ಇಂದು ಕಾಲೇಜ್ ಬೇಡವೆಂದು ತೀರ್ಮಾನಿಸಿ ತಿರುಗಿ ರೂಂನತ್ತ ನಡೆದೆ.

ದ್ವಿಚಕ್ರ ಸವಾರರಿಗೊಂದು ಮಾತು: 'ಪ್ರಯಾಣದ ದೂರ ಎಷ್ಟೇ ಇರಲಿ , ಹೆಲ್ಮೆಟ್ ನಿಮ್ಮ ಜೊತೆಗಿರಲಿ !! .'

No comments:

Post a Comment