Saturday 5 May 2012

'ಅಜ್ಜಿ ಹೇಳಿಸಿದ ಕಥೆ '


ಆ ದಿನ ರಾತ್ರಿ ತುಂಬಾ ಹೊತ್ತಾದರೂ ನಿದ್ದೆ ಬಂದಿರಲಿಲ್ಲ, ಗಂಟೆ ಹನ್ನೊಂದು ದಾಟಿತ್ತು .ಆಗಸದಲ್ಲಿನ ನಕ್ಷತ್ರಗಳನ್ನಾದರೂ ಎಣಿಸೋಣ ಎಂದು ತಾರಸಿಯತ್ತ ನಡೆದೆ. ಆಗಸ ಶುಭ್ರವಾಗಿತ್ತು .... 
ಹಾಗೇ ಒಂದೊಂದೇ ನಕ್ಷತ್ರಗಳನ್ನ ಎಣಿಸತೊಡಗಿದೆ . ಬಾಲ್ಯದ ಹಲವಾರು ದಿನಗಳು , ನೆನಪುಗಳು ಒಂದೊದಾಗಿಯೇ  ಕಣ್ಣೆದುರಿಗೆ ಹಾದು ಹೋದವು . ಇನ್ನೇನು ಲೆಕ್ಕ ಮುಗಿಯಿತು ಎನ್ನುವಷ್ಟರಲ್ಲಿ ಎಲ್ಲೋ ಇದ್ದ ಕಾರ್ಮೋಡಗಳು ದಟ್ಟೈಸತೊಡಗಿದವು. ಜೊತೆಗೆ ತಣ್ಣನೆಯ ಗಾಳಿ ಕೂಡ ಬೀಸುತಿತ್ತು. ಗಂಟೆ ನೋಡಿದೆ , ಹತ್ತಿರ ಹತ್ತಿರ ಒಂದು ಮುಕ್ಕಾಲಾಗಿತ್ತು  . ಸರಿ ಇನ್ನು ಮಲಗೋಣ ಎಂದು ಕೆಳಗಿಳಿಯುತ್ತಿದ್ದಾಗ ಪಕ್ಕದಮನೆಯ ಬಾಲ್ಕನಿಯಲ್ಲಿ ಓರ್ವ ಅಜ್ಜಿ ಕುರ್ಚಿಯಲ್ಲಿ ಕುಳಿತು ಮಂದಹಾಸ ಬೀರುತ್ತಿದ್ದರು.ನಾನು ಅವರನ್ನ ಇದೇ ಮೊದಲ ಬಾರಿಗೆ ನೋಡುತ್ತಿದ್ದೆ... ಅವರ ನಗುವಿನಲ್ಲಿ ಅದೇನೋ ಆಕರ್ಷಣೆ ಇತ್ತು... 
ನಾ ಕೇಳಿದೆ , ಏನ್ ದೊಡ್ದಮಾ ನಿದ್ದೆ ಬರ್ಲಿಲ್ವಾ ??!
ಉತ್ತರವಿಲ್ಲ ... ಬರೀ ನಗು... !!
ಇನ್ನೊಂದು ಬಾರಿ ಕೇಳಿದೆ !
ಮತ್ತೆ ನಗುತ್ತಾ , ' ಇವತ್ತು ಮಾತ್ರ ನಾನಿಲ್ಲಿ ಇರೋದು!!' ಎಂಬ ಉತ್ತರ ಬಂತು 
ನನ್ನ ಪ್ರಶ್ನೆಗೆ ಇದು ಉತ್ತರ ಅಲ್ಲ ಎಂದು ಮೂರನೆಯ ಬಾರಿಗೆ ಅದೇ ಪ್ರಶ್ನೆ ಕೇಳಿದೆ !
ಮತ್ತೆ ' ಇವತ್ತು ಮಾತ್ರ ನಾನಿಲ್ಲಿ ಇರೋದು!!' ಎಂದರು  ನಗು ನಗುತ್ತಾ !
ಛೆ ! ಇವರಿಗೆಲ್ಲೋ ಕಿವಿ ಸರಿಯಾಗಿ ಕೇಳಿಸುವುದಿಲ್ಲ ಎಂದು ಕೊಂಡು ರೂಮಿನತ್ತ ನಡೆದೆ ಮತ್ತು ಕಣ್ ಮುಚ್ಚಿ  ಮಲಗಿದೆ .

ಮರು ದಿನ ಬೆಳಗ್ಗೆ ತಿಂಡಿ ತಿನ್ನುತ್ತಿರುವಾಗ ಪಕ್ಕದ್ಮನೆಯಿಂದ ಮಧ್ಯಾಹ್ನದ ಊಟಕ್ಕೆ ಕರೆ ಬಂದಿತ್ತು. ಒಹ್ ! ಏನೋ ವಿಶೇಷವಿರಬೇಕು , ಊಟಕ್ಕೆ ಸರಿಯಾಗಿ ಹೋದರಾಯಿತು ಎಂದುಕೊಂಡೆ .
ಹನ್ನೆರಡು ಗಂಟೆಗೆ ಸರಿಯಾಗಿ ಅವರ ಮನೆಯತ್ತ ನಡೆದೆ. ಹಿಂದಿನ ರಾತ್ರಿ ಸುರಿದ ಭಾರೀ ಮಳೆಗೆ ವಾತಾವರಣ ತಂಪಾಗಿತ್ತು ಮತ್ತು ಮಧ್ಯಾಹ್ನದಲ್ಲಿಯೂ ಸ್ವಲ್ಪ ಸ್ವಲ್ಪ ಚಳಿಯ ಅನುಭವ ವಾಗುತಿತ್ತು .
ಅಲ್ಲಿಗೆ ಹೋದವನೇ ಆ ಮನೆಯವರಲ್ಲಿ ಕೇಳಿದೆ , ಏನು ಇವತ್ತು ವಿಶೇಷ ?? 
ಹಾ, ಇವತ್ತು ನನ್ನ ಅಮ್ಮನ ತಿಥಿ.... ! ಅದಕ್ಕೆ ನಿಮ್ಮನೆಲ್ಲ ಊಟಕ್ಕೆ ಕರೆದದ್ದು , ನೀವು ಬಂದದ್ದು ತುಂಬಾ ಖುಷಿ ಆಯಿತು , ಊಟ ಮಾಡ್ಕೊಂಡು ಹೋಗಿ ಆಯ್ತಾ .. ಎಂದರು,
ಸರಿ ಮನೆಯ ಒಳಾಂಗಣವನ್ನು ದಿಟ್ಟಿಸುತ್ತಾ ಇದ್ದೆ...  ಹಾಗೆಯೇ ...ಗೋಡೆಯತ್ತ ಕಣ್ ಹಾಯಿಸಿದಾಗ ನನಗೆ ಆಶರ್ಯ , ಆಘಾತ ಎರಡೂ ಕಾದಿತ್ತು!! 

ನಾ ನಿನ್ನೆ ನೋಡಿದ್ದ ಅಜ್ಜಿ ಇಂದೂ ಸಹ ಅದೇ ನಗುವಿನೊಂದಿಗೆ ಅದೇ ಭಂಗಿಯಲ್ಲಿ ಅದೇ ಕುರ್ಚಿಯಲ್ಲಿ ಕುಳಿತಿದ್ದರು. ಆದರೆ ಗೋಡೆಗೆ ತೂಗು ಹಾಕಿದ್ದ ಫೋಟೋದಲ್ಲಿ !!

ಅದುವರೆಗೂ ಚಳಿಯಾಗುತ್ತಿದ್ದ ನನಗೆ ಈಗ ಸಣ್ಣಗೆ ಸೆಕೆಯಾಗಲು ಶುರುವಾಯಿತು ಜೊತೆಗೆ ನಡುಕವೂ ಕೂಡ !!

'ಈಗ ಬರ್ತೇನೆ' ಎಂದು  ಊಟವೂ ಮಾಡದೆ ಹೋದ ನನಗೆ ಒಂದು ವಾರಗಳ ಕಾಲ ಜ್ವರ ತೀವ್ರವಾಗಿ ಕಾಡಿತ್ತು .!!

1 comment: