Sunday, 29 December 2013

ಪಕ್ಷಿಗಳ ಲೋಕದಲ್ಲಿ

 ಬಹಳ ವರ್ಷಗಳ ಬಳಿಕ ಆದಿತ್ಯವಾರ ಬೆಳಗ್ಗೆಗೆ ಮೊಬೈಲ್ ನಲ್ಲಿ ಅಲರಾಂ ಸೆಟ್ ಮಾಡಿದ್ದೆ ! ಬ್ಲಾಗ್ಗೆ ಅಲರಾಂ ಆಗುವುದಕ್ಕೂ ಗೆಳೆಯ ಶ್ರೀಕಾಂತ ಫೋನ್ ಮಾಡುವುದಕ್ಕೂ ಸರಿಯಾಗಿತ್ತು. ಅತ್ತ ಕಡೆಯಿಂದ "ನಾನು ಮನೆಯಿ೦ದ ಹೊರಟಾಗಿದೆ , ಇನ್ನು ಹತ್ತ್  ನಿಮಿಷದಲ್ಲಿ ಉಡುಪಿ ಬಸ್ ಸ್ಟ್ಯಾಂಡ್ ನಲ್ಲಿ ಇರ್ತೇನೆ ನೀನೂ ಅಲ್ಲಿಗೆ ಬಾ " ಎಂದು ಒಂದೇ ಉಸಿರಿನಲ್ಲಿ ಹೇಳಿ ಫೋನ್ ಕಟ್ ಮಾಡಿದ. ಲಗುಬಗೆಯಿಂದ ಪ್ರಾತಃ ವಿಧಿಗಳನ್ನು ಪೂರೈಸಿ ಹಿಂದಿನ ದಿನ  ಜೋಡಿಸಿಡಲು ಮರೆತಿದ್ದ ಕ್ಯಾಮೆರ , ಪೆನ್ನು , ಪುಸ್ತಕ ತುರುಕಿ ಕೊಂಡು  ಬಸ್ ಸ್ಟ್ಯಾಂಡ್ ನತ್ತ ದೌಡಾಯಿಸಿದೆ. ನಾವಿಬ್ಬರೂ ಅಂದು ಕಾರ್ಕಳದಲ್ಲಿ ಪಕ್ಷಿ ತಜ್ಞ ಎಸ್. ಎ. ಹುಸ್ಸೇನ್ ಅವರ ಸ್ಮರಣಾರ್ಥ ಆಯೋಜಿಸಲಾಗಿದ್ದ 'ಪಕ್ಷಿ ವೀಕ್ಷಣೆ'(ಬರ್ಡ್ ವಾಚಿಂಗ್) ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವವರಿದ್ದೆವು. ಅದಾಗಲೇ ಬಸ್ ಸ್ಟ್ಯಾ೦ಡ್ ನಲ್ಲಿ ಕಾರ್ಕಳ ದ ಬಸ್ ಬಳಿ ನಿಂತು ನನಗಾಗಿ ಕಾಯುತ್ತಿದ್ದ ಶ್ರೀಕಾಂತ. ಇವೆಲ್ಲವನ್ನೂ ನೊಡುತ್ತಿದ್ದ ಭಾಸ್ಕರ ಬಾನ೦ಗಳದಲ್ಲಿ ಮೋಡಗಳ ಜೊತೆ ಕಣ್ಣಾಮುಚ್ಚಾಲೆ ಆಡುತ್ತಿದ್ದ.

ಪಶ್ಚಿಮ ಘಟ್ಟದ ತಪ್ಪಲು ಪ್ರದೇಶವಾದ ಕಾರ್ಕಳ ಉಡುಪಿ ಜಿಲ್ಲೆಯ ಪ್ರಸಿದ್ಧ ಪ್ರವಾಸೀ ಸ್ಥಳವೂ ಹೌದು. ಇಲ್ಲಿನ ವಿಶ್ವ ವಿಖ್ಯಾತ ಗೋಮತೇಶ್ವರನ ಏಕ ಶಿಲಾ ವಿಗ್ರಹವನ್ನು , ಹಲವಾರು ಪುರಾತನ ಜೈನ ಬಸದಿಗಳನ್ನು ನೋಡಲು ಹಲವಾರು ಪ್ರವಾಸಿಗರು ಪ್ರತೀ ವರ್ಷ ಆಗಮಿಸುತ್ತಾರೆ. ಪ್ರಕೃತಿ ಪ್ರಿಯರ ಪಾಲಿಗೆ ಇದೊ೦ದು ರೀತಿ ಸ್ವರ್ಗವಿದ್ದ೦ತೆ .  ಉಡುಪಿಯಿ೦ದ ಕಾರ್ಕಳಕ್ಕಿರುವ ದೂರ ಸುಮಾರು ೩೫-೩೮ ಕಿ.ಮೀ. 


 ಉಡುಪಿಯಿಂದ ಕಾರ್ಕಳದ ನಡುವಿನ ಬಸ್ ಪ್ರಯಾಣವಂತೂ ಹೇಳಲಸಾಧ್ಯ. ಅದರಲ್ಲೂ ಎಕ್ಸ್ ಪ್ರೆಸ್ ಬಸ್ ಪ್ರಯಾಣ ವೆಂದ ಮೇಲೆ ಅದನ್ನು ಅನುಭವಿಸಿಯೇ ಹೇಳಬೇಕು. ಯಾವುದೇ ಚಿಕ್ಕ , ದೊಡ್ಡ ಹೊಂಡಗಳನ್ನ ಲೆಕ್ಕಿಸದೇ ಬಸ್ ರಾಜಾ ರೋಷವಾಗಿ ಸಾಗುತ್ತಿದ್ದರೆ , ಇತ್ತ ಬಸ್ಸಿನೊಳಗೆ ಪ್ರಯಾಣಿಕರು ಕೈಗೆ ಸಿಕ್ಕ , ಕಂಬಿ , ಸೀಟಿನ ಅಂಚು ಯಾವುದನ್ನಾದರೂ ಗಟ್ಟಿಯಾಗಿ ಹಿಡಿದುಕೊಂಡು , ಅವಡುಗಚ್ಚಿ ತಮ್ಮ ಸ್ಟಾಪ್ ಬರುವುದನ್ನೇ ಕಾಯುತ್ತಿದರು. ಇದಕ್ಕೆ ಹಿನ್ನೆಲೆಯಾಗಿ ತಟಪಟ ಸದ್ದು ಮಾಡುತ್ತ  ಬಸ್ಸಿನ ಕಿಟಕಿಗಳ ಟ್ಯಾಪ್ ಡಾನ್ಸ್ !! ಎಲ್ಲ ಅನುಭವಿಸಿ ಕಾರ್ಕಳಕ್ಕೆ ಬಂದಿಳಿದಾಗ ಸಮಯ ೮:೨೦. ಅಲ್ಲಿಂದ ಸೀದಾ ನಡೆದದ್ದು ಹೋಟೆಲ್ ಪ್ರಕಾಶ್ ಬಳಿ ಅಲ್ಲಿ ಅದಾಗಲೇ ನಮ್ಮಂತೆ ಹಲವು ಹವ್ಯಾಸಿ ಪಕ್ಷಿ ವೀಕ್ಷಕರು ಬಂದು ಸೇರಿದ್ದರು.ಉಭಯ ಕುಶಲೋಪರಿ ವಿನಿಮಯವಾದ ಬಳಿಕ ಅಲ್ಲೇ ಪ್ರಕಾಶ್ ಹೋಟೆಲ್ ನಲ್ಲಿ ಬೆಳಗಿನ ಉಪಾಹಾರ ಮುಗಿಸಿದೆವು. ಅಲ್ಲಿ ನೆರೆದಿದ್ದ ೨೫ ಜನರು ೫ ತಂಡಗಳಾಗಿ ದುರ್ಗ ಅಭಯಾರಣ್ಯದತ್ತ ಪ್ರಯಾಣ ಬೆಳೆಸಿದೆವು.  ನಾನು ,ರಾಜ್ ಮೋಹನ್ ಸರ್ , ಯೆಸ್. ಎ . ಹುಸ್ಸೇನ್ ರ ಸಂಬಂಧಿ ರಶೀದ್ ಸರ್ , ಸುದೀಪ್, ಅಭಿಜಿತ್ , ರವಿ ಪ್ರಕಾಶ್ , ಶ್ರುತಿ ಈ ಏಳು ಜನರನ್ನೊಳಗೊ೦ಡ ನಮ್ಮ ತಂಡ ಅರಣ್ಯದ ಕೊನೆಯ ಭಾಗಕ್ಕೆ ಬಂದು ತಲುಪಿದೆವು. ಕಾಡು ಸೇರಿದ ನಮನ್ನು ವಿಶಾಲವಾಗಿ ಹಬ್ಬಿಕೊ೦ಡಿರುವ ಗಗನ ಚು೦ಬಿ ಮರಗಳು , ಆ ಮರಗಳನ್ನು ಬಿಗಿದಪ್ಪಿಕೊ೦ಡಿರುವ ವಿವಿಧ ಬಗೆಯ ಬಳ್ಳಿಗಳು, ಮರದಿ೦ದ ಮರಕ್ಕೆ ಹಬ್ಬಿದ ವಿಶಾಲವಾದ ಜೇಡರ ಬಲೆಗಳು ಇದೆಲ್ಲಕ್ಕಿ೦ತ ಹೆಚ್ಚಾಗಿ  ಗವ್ ಎನ್ನುವ ಮೌನ ಮತ್ತು ಆಗಾಗ್ಗೆ ಅದನ್ನು ಸೀಳಿಕೊಂಡು ಬರುತ್ತಿದ್ದ ಹಕ್ಕಿಗಳ ಚಿಲಿಪಿಲಿ ಗಾನ ಭರ್ಜರಿಯಾಗಿ ಸ್ವಾಗತಿಸಿದ್ದವು. ಪಶ್ಚಿಮ ಘಟ್ಟದ ಕಾಡೆ೦ದರೆ ಕೇಳಬೇಕೆ ? ಇಲ್ಲಿನ ಪ್ರತಿಯೊ೦ದು ಮರಗಳೂ ಆಗಷ್ಟೇ ಹುಟ್ಟಿದ೦ತೆ , ಹಸಿರುಹಸಿರಾಗಿ ತಾಜಾತನದಿ೦ದ ಕೂಡಿವೆ. ಈ ಸೌ೦ದರ್ಯವನ್ನು ಒ೦ದೊ೦ದಾಗಿ ಸವಿತಯುತ್ತಾ ಬ್ಯಾಗಿನಲ್ಲಿದ್ದ ಕ್ಯಾಮೆರ , ದುರ್ಬೀನು ಗಳನ್ನು ಬಗಲೇರಿಸಿಕೊಂಡು ಕೈಲಿ ಪುಸ್ತಕ ಪೆನ್ನು ಹಿಡಿದುಕೊಂಡು  ಪ್ರಾಕೃತಿಕ ಎ.ಸಿ. ಚೇ೦ಬರಿನೊಳಗೆ  ನಿಧಾನವಾಗಿ ಹೆಜ್ಜೆ ಹಾಕಿದೆವು.

ಕಾಡಿನಲ್ಲಿ ನಮಗೆ ಮೊದಲು ಕಾಣ ಸಿಕ್ಕಿದ್ದು purple sunbird ಅಥವಾ 'ನೇರಳೆ ಸೂರಕ್ಕಿ'  ಲೋಹದ ಹೊಳಪಿನ ಗಾಢ ನೀಲಿ ಮೈ ಬಣ್ಣ ಹೊಂದಿರುವ ಈ ಹಕ್ಕಿಯ ಎದೆಯ ಭಾಗದಲ್ಲಿ ಕೆಂಪು ಅಥವಾ ಹಳದಿ ಮಚ್ಚೆಗಳನ್ನು ಕಾಣಬಹುದು. ಚೆವಿಟ್ .. ಚೆವಿಟ್.. ಎದು ಕೂಗುತ್ತ ಮರದಿಂದ ಮರಕ್ಕೆ ಅತ್ತಿಂದಿತ್ತ  ಏನನ್ನೋ ತೆಗೆದುಕೊಂಡು ಹೋಗುತ್ತಿತ್ತು. ಒಂದೈದು ನಿಮಿಷ ಅದರ ಚಟುವಟಿಕೆ ಗಮನಿಸಿದ ನಮಗನ್ನಿಸಿದ್ದು ಅದು ಬಹುಶಃ ಗೂಡು ಕಟ್ಟುತ್ತಿರಬೇಕೆ೦ದು. ನಂತರ ಮುಂದೆ ಸಾಗಿದ ನಮಗೆ ಕಾಣಸಿಕ್ಕಿದ್ದು ಭಾರತದ ಸುಂದರ ಹಕ್ಕಿಗಳಲ್ಲೊ೦ದಾದ Asian paradaise flycatcher ಅಥವಾ  'ರಾಜ ಹಕ್ಕಿ ' ಕಡುನೀಲಿ , ಕಪ್ಪು ತಲೆ , ಅಚ್ಚ ಬಿಳಿ ದೇಹ ಹೊಂದಿದ ಈ ಹಕ್ಕಿಗೆ ಸುಮಾರು ೫೦ ಸೆಂ. ಮೀ . ಉದ್ದದ ಬಿಳಿ ಬಾಲವೂ ಇದೆ. ಈ ಹಕ್ಕಿಯನ್ನು ಕಂಡ ಕೂಡಲೇ ನಮ್ಮ ತಂಡದವರೆಲ್ಲರೂ ಆಶ್ಚರ್ಯದಿಂದ ಉದ್ಗರಿಸಿದ್ದರು. ಸುಮಾರು ೩೦ ಸೆಕೆಂಡುಗಳ ಕಾಲ ದರ್ಶನವಿತ್ತ ಈ ಹಕ್ಕಿ ಚ್... ಚ್ಯು.. ಎಂದು ಕೂಗುತ್ತಾ ಕಾಡ ಗರ್ಭದಲ್ಲಿ ಮರೆಯಾಯಿತು. ಈ ಹಕ್ಕಿ ಹಾರಾಡುವಾಗ ಅದರ ರಿಬ್ಬನಿನಂತಹ ಬಾಲಗಳು ಮನಮೋಹಕ , ಅದನ್ನು ನೋಡುವುದೇ ಕಣ್ಣಿಗೊಂದು ಹಬ್ಬ !. ಹೀಗೇ ಈ ಹಕ್ಕಿಯ ಕುರಿತಂತೆ ಒಬ್ಬೊಬ್ಬರು ತಮ್ ತಮ್ಮ ಅನುಭವಗಳನ್ನ ಹಂಚಿಕೊಳ್ಳುತ್ತಿದ್ದಾಗ ಛ೦ಗನೆ ನಮ್ಮೆದುರು ಹಾರಿ ಬಂದದ್ದು  Ruby throated bulbul ಅಥವಾ 'ಕೆ೦ಕೊರಳಿನ ಪಿಕಳಾರ'. ಕಪ್ಪು ತಲೆ , ಜುಟ್ಟು ,ಮಾಸಲು ಹಸಿರು ಮೇಲ್ಮೈ , ಕತ್ತಿನಲ್ಲಿ ಕೆಂಬಣ್ಣದ ಮಚ್ಚೆ ಹೊಂದಿದ ಈ ಹಕ್ಕಿ ನೋಡಲು ಬಲು ಚೆಂದ . ಸಂಗೀತ ಮನೆತನಕ್ಕೆ ಸೇರಿದ ಅದರಲ್ಲೂ ಸಮೂಹ ಗಾನಕ್ಕೆ ಹೆಸರಾದ ಈ ಹಕ್ಕಿಗಳು ಸಾಮಾನ್ಯವಾಗಿ ಕಾಡುಗಳಲ್ಲಿ, ಹೋದೋಟಗಳಲ್ಲಿ ,ಗಿಡ ಗಂಟಿ ಪೊದೆಗಳಲ್ಲಿ ಕಾಣ ಸಿಗುತ್ತವೆ. ಸದಾ ಕುತೂಹಲದಿಂದ , ಲವಲವಿಕೆಯಿಂದ ಅತ್ತಿಂದಿತ್ತ ಹಾರಾಡುತ್ತಿದ್ದರೆ ಇಡೀ ವಾತಾವರಣಕ್ಕೆ ಹೊಸ ಕಳೆ ಮೂಡುತ್ತದೆ. ನಂತರ ಕಾಣಸಿಕ್ಕಿದ್ದು Asian Fairy blue bird ಅಥವಾ 'ನೀಲಿ ಸಿಳ್ಳಾರ'. ಈ ಹಕ್ಕಿ ಕಡು ನೀಲಿ ಬಣ್ಣದಿಂದ ಕೂಡಿದ್ದು , ಕೆನ್ನೆ , ರೆಕ್ಕೆ ಹಾಗೂ ಬಾಲದ ಭಾಗ ಕಡು ಕಪ್ಪು ಬಣ್ಣ ಹೊಂದಿದೆ. ಬಾಲದ ಬುಡ ನೀಲಿ ಹಾಗು ಕಡು ಕೆಂಪು ಕಣ್ಣುಗಳನ್ನು ಹೊಂದಿದ ಈ ಹಕ್ಕಿ ಬಿಸಿಲಿಗೆ ಹೊಳೆಯುತ್ತ ಬಹು ಆಕರ್ಷಕವಾಗಿ ಕಾಣುತ್ತದೆ. ಇದರ ಸೌಂದರ್ಯ ವೀಕ್ಷಿಸುತ್ತಿದ್ದ ನಮಗೆ ಗಿಡ ಗ೦ಟಿಗಳ  ನಡುವಿನಿಂದ  ಕಿಚಿ... ಕಿಚೀ ಸದ್ದು ಮಾಡುತ್ತ ಸುಮಾರು ೬-೭ Black Throated Munia ಅಥವಾ ಕರಿಕತ್ತಿನ ರಾಟವಾಳ ಹಕ್ಕಿಗಳು ಮೀಟಿಂಗ್ ನಡೆಸುತ್ತಿದ್ದವು. ಕಡ್ಡಿಗಳನ್ನು ಹಿಡಿದುಕೊಡು ಜೋತಾಡುತ್ತಾ ಅತ್ತಿಂದಿತ್ತ ಜಿಗಿಯುತ್ತ ಏನೇನೋ ಮಾತನಾಡಿಕೊಳ್ಳುತ್ತಿದ್ದವು. ಫೊಟೊ ತೆಗೆಯೋಣ ಎಂದು ಫೋಕಸ್ ಮಾಡುವಷ್ಟರಲ್ಲಿ ಅಷ್ಟೂ ಹಕ್ಕಿಗಳು ಪುರ್ರನೆ ಹಾರಿ ತಮ್ಮ ಮೀಟಿಂಗ್ ಲೋಕೇಶನ್ ಶಿಫ್ಟ್ ಮಾಡಿಕೊಂಡವು .  ಸುಮಾರು ೧.೫ - ೨ ಕಿ. ಮೀ . ವರೆಗೂ ಸಾಗಿದ ನಮ್ಮ ತ೦ಡಕ್ಕೆ  ಇವಿಷ್ಟಲ್ಲದೇ ಇನ್ನೂ ಹತ್ತು ಹಲವು ಜಾತಿಯ ವಿಶಿಷ್ಟ ಹಕ್ಕಿಗಳು ಕಾಣ ಸಿಕ್ಕವು. ಇನ್ನೇನು ಬರ್ಡ್ ವಾಚಿಂಗ್ ಮುಗಿಯಿತು ಎನ್ನುವಷ್ಟರಲ್ಲಿ ಕೆಲ ಅಪರೂಪದ ಅತಿಥಿಗಳು ನಮಗಾಗಿ ಕಾಯುತ್ತಿದ್ದವು. ಅವೇ Malabaar Trogon , Shrilanka Frogmouth ಹಾಗೂ   Heart Spotted Wood pecker.

Malabaar Trogon ಅಥವಾ ಕಾಕಾರಣೆ ಹಕ್ಕಿಗಳು ನೋಡಲು ಬಲು ಚೆಂದ. ಕಪ್ಪು ತಲೆ , ಕತ್ತು , ಎದೆ , ಎದೆಯ ಮೇಲೆ ಬಿಳಿ ಸರ , ಹೊಳೆಯುವ ಕೆಂಬಣ್ಣದ ಕೆಳ  ಮೈ , ಹಳದಿಗಂದು ಬೆನ್ನು , ಬಿಳಿ ಪಟ್ಟೆ ಹೊಂದಿದ ಅಪ್ಪು ರೆಕ್ಕೆಗಳನ್ನು ಹೊಂದಿದ ಈ ಹಕ್ಕಿಯ ಸೌಂದರ್ಯವನ್ನ ಬರಿಯ ಪದಗಳಲ್ಲಿ ವರ್ಣಿಸಲಸಾಧ್ಯ. ಸದಾ ಹಸಿರು ತುಂಬಿರುವ ಕಾಡುಗಳಲ್ಲಿ ಈ ಹಕ್ಕಿಗಳು ಹೆಚ್ಚಾಗಿ ಕಾಣಸಿಗುತ್ತವೆ.Shrilanka Frogmouth ಅಥವಾ ಕಪ್ಪೆ ಬಾಯಿ , ತುಸು ನಾಚಿಕೆ ಸ್ವಭಾವದ ಈ ನಿಶಾಚರಿ ಅಗಲವಾದ ಚಪ್ಪಟೆಯಾದ ತ್ರಿಕೋನಾಕಾರದ ಕೊಕ್ಕನ್ನು ಹೊಂದಿದ್ದು , ಕಪ್ಪೆಯಂತಹ ಬಾಯಿ , ಗಿಡ್ಡ ಕತ್ತು ಹಾಗು ಕಾಲುಗಳನ್ನು ಹೊ೦ದಿದೆ . ಈ ಹಕ್ಕಿ ಹೆಚ್ಚಾಗಿ ಬಿದಿರು ಕಾಡುಗಳಲ್ಲಿ ವಾಸಿಸುತ್ತವೆ. ಹಗಲು ಹೊತ್ತಿನಲ್ಲಿ ಮಲಗಿರುವ ಈ ಹಕ್ಕಿ ಪಕ್ಕನೆ ನೋಡಿದಾಗ ಮರದ ಬೊಡ್ಡೆಯ೦ತೆಯೋ ಇಲ್ಲಾ ಒಣಗಿದ ಎಲೆಯ೦ತೆಯೋ ಕಾಣುತ್ತದೆ.    ಇನ್ನು   Heart Spotted Wood pecker ಅಥವಾ ಚುಕ್ಕೆ ಮರಕುಟಿಗ. ತೇಗ , ಬಿದಿರು ಕಾಡುಗಳಲ್ಲಿ ಕಾಣ ಬರುವ ಈ ಹಕ್ಕಿಯ ಜುಟ್ಟು , ತಲೆ  ಹಣೆ ಹಾಗೂ ಬೆನ್ನಿನ  ಭಾಗ ಕಪ್ಪು ಬಣ್ಣದಿಂದ ಕೂಡಿದ್ದು ಗಂಟಲು , ಹಿಂಗತ್ತು ಹಾಗೂ ಕೆಳಮೈ ಬಿಳಿ ಬಣ್ಣದಿಂದ ಕೂಡಿದೆ. ರೆಕ್ಕೆಗಳ ಬಿಳಿ ಪಟ್ಟೆಯ ಮೇಲೆ ಹೃದಯಾಕಾರದ ಮಚ್ಚೆಗಳಿದ್ದು ನೋಡಲು ಅತ್ಯಾಕರ್ಷಕವಾಗಿದೆ. ಒಟ್ಟಾರೆಯಾಗಿ ಅಂದು ನಮ್ಮ ತಂಡ ೩೦-೩೫ ವಿವಿಧ ಪ್ರಭೇಧದ ಹಕ್ಕಿಗಳನ್ನು ಗುರುತಿಸಿತ್ತು.  ಚಾರಣದುದ್ದಕ್ಕೂ ರಾಜ್ ಮೋಹನ್ ಸರ್ ಹಾಗೂ ರಶೀದ್ ಸರ್  ಹಕ್ಕಿಗಳ  ಬಗೆಗಿನ ಕುತೂಹಲಕಾರಿ ವಿಷಯಗಳನ್ನು ನಮ್ಮೊಡನೆ ಹಂಚಿಕೊಳ್ಳುತ್ತಿದ್ದರು. 

ಕಾಡಿನಿಂದ ಹೊರ ಬಂದ  ನಮಗೆ ಯಾವುದೋ ಹೊಸ ಲೋಕಕ್ಕೆ ಹೋಗಿ  ಬಂದ ಅನುಭವವಾಗಿತ್ತು. ಸುಮಾರು ೨-೨:೩೦ ಗ೦ಟೆಗಳ ಕಾಲ ಹೊರಜಗತ್ತಿನ ಪರಿವೇ ಇಲ್ಲದೆ(ಮೊಬೈಲ್ , ಇಂಟರ್ ನೆಟ್ ಸಂಪರ್ಕ ಕಡಿದು ಹೋದುದರಿಂದ ) ಪಕ್ಷಿಗಳ ಲೋಕದಲ್ಲಿ , ಪ್ರಕೃತಿಯ ಜತೆ ಒಂದಾಗಿ ಇದ್ದುದು ಹೊಸ ಅನುಭವವನ್ನು ನೀಡಿತ್ತು. ಮಧ್ಯಾಹ್ನ ಒಂದು ಘಂಟೆಗೆ ಸರಿಯಾಗಿ ನಮ್ಮ ಬರ್ಡ್ ವಾಚಿಂಗ್ ಮುಗಿದಿತ್ತು. ಮನದ ಮೂಲೆಯಲ್ಲೆಲ್ಲೋ ಸುತ್ತಾಡುತ್ತಿದ್ದ  ಅತೃಪ್ತಿಯನ್ನು ಅದುಮಿಟ್ಟುಕೊ೦ಡು ವಾಪಸ್ಸಾದೆವು.

ದುರ್ಗ ಕಾಡಿನ ಸುತ್ತಮುತ್ತಲ ಬಹು ಭಾಗ ಖಾಸಗಿಯವರ ಸುಪರ್ದಿಯಲ್ಲಿದ್ದು ವರ್ಷದಿ೦ದ ವರ್ಷಕ್ಕೆ ಅಸ೦ಖ್ಯಾತ ಮರಗಳು ನಿಧಾನವಾಗಿ ನೆಲಕ್ಕೊರಗುತ್ತಿವೆ ಇದನ್ನೇ ಆಸರೆಯಾಗಿಸಿಕೊ೦ಡ ಪಕ್ಷಿಗಳು ನೆಲೆ ಕಳೆದುಕೊ೦ಡು ಅತ೦ತ್ರವಾಗುತ್ತಿವೆ. ಅರಣ್ಯದ ಅತ್ಯಮೂಲ್ಯ ರತ್ನಗಳಾದ ಪ್ರಾಣಿ ಪಕ್ಷಿಗಳು , ಗಿಡ ಬಳ್ಳಿಗಳು ವಿನಾಶದ ಅ೦ಚಿನಲ್ಲಿವೆ.
ಋಣ : ಕೊಡಗಿನ ಖಗ ರತ್ನ ಗಳು - ಎಸ್ . ವಿ. ನರಸಿಂಹನ್ 
ಚಿತ್ರಗಳು ಮತ್ತು ಲೇಖನ : ವೆಂಕಟೇಶ್ ಪ್ರಸಾದ್ 


ಪಕ್ಷಿ ವೀಕ್ಷಣೆಯಲ್ಲಿ ನಾನು ಕ್ಲಿಕ್ಕಿಸಿದ ಕೆಲ ಫೊಟೊಗಳು :

Sun Bird


Asian Fairy Blue Bird

Malabar Trogon


Ruby Throated Bulbul


No comments:

Post a Comment